ADVERTISEMENT

ಬಾಣಾವರ: ಅಗ್ರಹಾರ ಬಡಾವಣೆಗೆ ಬೇಕಿದೆ ಕಾಯಕಲ್ಪ

ಚರಂಡಿ ವ್ಯವಸ್ಥೆ ಇಲ್ಲದೇ ತ್ಯಾಜ್ಯ ನೀರು ರಸ್ತೆಗೆ; ಸೊಳ್ಳೆಗಳ ಉಪಟಳ

ಪ್ರಸನ್ನಕುಮಾರಸುರೆ
Published 21 ಜೂನ್ 2022, 19:30 IST
Last Updated 21 ಜೂನ್ 2022, 19:30 IST
ಬಾಣಾವರ ಅಗ್ರಹಾರ ಬಡಾವಣೆಯ ಒಂದು ನೋಟ
ಬಾಣಾವರ ಅಗ್ರಹಾರ ಬಡಾವಣೆಯ ಒಂದು ನೋಟ   

ಬಾಣಾವರ: ಇಲ್ಲಿನ ಅಗ್ರಹಾರ ಬಡಾವಣೆ ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ. ಆದರೆ ವೇಗಕ್ಕೆ ತಕ್ಕಂತೆ ಸೌಲಭ್ಯಗಳು ಲಭಿಸದೇ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.

ವ್ಯವಸ್ಥಿತ ಚರಂಡಿ ಸೌಲಭ್ಯವಿಲ್ಲದೇ ಶೌಚೌಲಯದ ನೀರು ಹರಿದು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಕಸ ಕಡ್ಡಿ ತುಂಬಿರುವ ಖಾಲಿ ನಿವೇಶನಗಳು, ರಸ್ತೆಯ ಅಕ್ಕಪಕ್ಕ ತಾಜ್ಯದ ರಾಶಿ ಹೀಗೆ ಅಗ್ರಹಾರ ಬಡಾವಣೆ ಸಮಸ್ಯೆಯನ್ನು ಹಾಸಿ ಹೊದ್ದು ಮಲಗಿದಂತೆ ಕಾಣುತ್ತಿದೆ.

ಪಟ್ಟಣದ ಹೃದಯ ಭಾಗದಲ್ಲಿದ್ದರೂ, ಕಾಚಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಅಗ್ರಹಾರ ಬಡಾವಣೆಯಲ್ಲಿ 400– 500 ಮನೆಗಳಿದ್ದು, ಎರಡು ಸಾವಿರ ಜನಸಂಖ್ಯೆ ಇದೆ. ಹೆಚ್ಚಾಗಿ ಸುಶಿಕ್ಷಿತರು ಹಾಗೂ ಸರ್ಕಾರಿ ನೌಕರರೇ ವಾಸವಿದ್ದರೂ, ಸೌಲಭ್ಯಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.

ADVERTISEMENT

ಬಡಾವಣೆಯ ಬಹುತೇಕ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿದ್ದರೂ, ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನೇಕ ವಠಾರಗಳಲ್ಲಿ ಮನೆಯ ತ್ಯಾಜ್ಯ ನೀರು ಸಾಗಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಬಡಾವಣೆಯ ಮನೆಗಳ ಪಕ್ಕ ಕೊಳಚೆ ನೀರು ನಿಲ್ಲುತ್ತಿದ್ದು, ಹಲವು ರೋಗ ರುಜಿನಗಳಿಗೆ ಆಹ್ವಾನ ನೀಡುವಂತಿದೆ. ಚರಂಡಿ ಅಸುಪಾಸಿನಲ್ಲಿ ಗಿಡ ಗಂಟೆಗಳು ಬೆಳೆದು, ದುರ್ವಾಸನೆ, ಹುಳಗಳ ಕಾಟ ಹೆಚ್ಚುತ್ತಿದೆ. ರಸ್ತೆಯ ಪಕ್ಕದ ಚರಂಡಿ ಕಟ್ಟಿಕೊಂಡು ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿವೆ. ಕೆಲವು ಮನೆಯ ಮಾಲೀಕರೇ ಚರಂಡಿ ನಿರ್ಮಿಸಿಕೊಂಡಿದ್ದರೂ, ನೀರು ಊರಿಂದ ಆಚೆ ಹೋಗುವ ವ್ಯವಸ್ಥೆ ಸರಿ ಇಲ್ಲದ ಪರಿಣಾಮ ಸಮಸ್ಯೆಗಳು ಮತ್ತಷ್ಟು ಹೆಚ್ಚಿವೆ.

ಬಡಾವಣೆಯಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆಯಿಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ಕಸ ಎಸೆಯುವ ಸ್ಥಿತಿ ಬಂದಿದೆ. ಬಡಾವಣೆಯ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತುಂಬಿ ಅನೈರ್ಮಲ್ಯದ ತಾಣಗಳಾಗಿವೆ.

ಒಂದು ಉದ್ಯಾನವೂ ಇಲ್ಲದೇ ಇರುವುದರಿಂದ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ನಿತ್ಯ ವಾಯುವಿಹಾರಕ್ಕೆ ಸಮಸ್ಯೆಯಾಗುತ್ತಿದೆ. ಚಿಕ್ಕ ಮಕ್ಕಳು ಖಾಲಿ ನಿವೇಶನಗಳನ್ನೇ ತಮ್ಮ ಆಟದ ಮೈದಾನಗಳನ್ನಾಗಿ ಮಾಡಿಕೊಂಡಿದ್ದಾರೆ.

ಅಗ್ರಹಾರ ಬಡಾವಣೆಗಾಗಿಯೇ ನೀರಿನ ಟ್ಯಾಂಕ್ ನಿರ್ಮಿಸಿದರೆ, ಜನರಿಗೆ ನೀರು ಸರಬರಾಜು ಮಾಡಲು ಸಹಾಯವಾಗುತ್ತದೆ ಎಂಬುದು ಜನಸಾಮಾನ್ಯರ ಅಭಿಮತ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಅಗ್ರಹಾರ ಬಡಾವಣೆಗೆ ಮೂಲಸೌಲಭ್ಯ ಒದಗಿಸಬೇಕು ಎಂಬುದು ಸಾರ್ವಜನಿಕರ ಅಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.