ಹಾಸನ: ಜಿಲ್ಲೆಯ ಕೃಷಿಕರಿಗೆ ಬೆಳೆ ಮಾಹಿತಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕಾದ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ ಎದುರಾಗಿದ್ದು, ಕೂಡಲೇ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆಗಳು ಒತ್ತಾಯಿಸಿವೆ.
‘ಜಿಲ್ಲೆಯಲ್ಲಿ ಒಟ್ಟು 134 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ಇದೆ. ಜಿಲ್ಲಾ ವ್ಯಾಪ್ತಿಯಲ್ಲಿ 38 ರೈತ ಸಂಪರ್ಕ ಕೇಂದ್ರಗಳಿದ್ದರೆ, ಕೇವಲ 20 ಕೃಷಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 18 ರೈತ ಸಂಪರ್ಕ ಕೇಂದ್ರಗಳಿಗೆ ಅಧಿಕಾರಿಗಳ ಕೊರತೆ ಇದೆ’ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
‘ಉಳಿದಂತೆ 20 ದ್ವಿತೀಯ ದರ್ಜೆ ಸಹಾಯಕರು, 8 ಪ್ರಥಮ ದರ್ಜೆ ಸಹಾಯಕರು, 37 ಡಿ ಗ್ರೂಪ್ ನೌಕರರು ಸೇರಿದಂತೆ ಕೃಷಿ ಇಲಾಖೆಯಲ್ಲಿ ಸುಮಾರು 232 ಹುದ್ದೆಗಳು ಜಿಲ್ಲೆಯಲ್ಲಿ ಖಾಲಿ ಇವೆ’ ಎಂದು ತಿಳಿಸಿದರು.
ಜಿಲ್ಲೆಯು ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡಿದ್ದು, ಮಳೆ ಆಶ್ರಿತ ಹಾಗೂ ನಾಲೆ, ಕೊಳವೆಬಾವಿ ಆಶ್ರಯದಲ್ಲಿಯೂ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಜಿಲ್ಲೆಯಲ್ಲಿ ಮುಸುಕಿನ ಜೋಳ, ರಾಗಿ, ಭತ್ತ, ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ. ಆದರೆ ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಇತರೆ ಸೌಲಭ್ಯ ಒದಗಿಸಬೇಕಾದ ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆಯಿಂದಾಗಿ ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ.
ಮಳೆಯಿಂದ ಹಾನಿಗೆ ಒಳಗಾದ ಬೆಳೆಗಳ ಮಾಹಿತಿ ಪಡೆಯುವುದಕ್ಕೂ ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯ ಕೊರತೆ ಇದೆ. ಇರುವ ಅಧಿಕಾರಿ ಹಾಗೂ ಸಿಬ್ಬಂದಿ ಕಚೇರಿಯ ಕೆಲಸ ಮಾಡುವುದಕ್ಕೆ ಸಾಕಾಗುತ್ತಿಲ್ಲ. ಇನ್ನು ಗ್ರಾಮೀಣ ಪ್ರದೇಶಗಳ ರೈತರು ಬೆಳೆಯುವ ಗದ್ದೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಲು ಸಮಯವೇ ಸಿಗುತ್ತಿಲ್ಲ. ಒಬ್ಬರು ಎಷ್ಟು ಕೆಲಸ ಮಾಡಲು ಸಾಧ್ಯ ಎಂದು ಕೃಷಿ ಅಧಿಕಾರಿಯೊಬ್ಬರು ಪ್ರಶ್ನಿಸಿದರು.
ಇದೀಗ ಮುಂಗಾರು ಮಳೆ ಶುರುವಾಗಿದ್ದು, ರೈತರು ಹೊಲ–ಗದ್ದೆ ಹದ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ವಿತರಣೆ ಮಾಡಬೇಕು. ಆದರೆ ಕೃಷಿ ಇಲಾಖೆಯಲ್ಲಿ ಮಾಹಿತಿ ನೀಡಬೇಕಾದ ಅಧಿಕಾರಿಗಳ ಕೊರತೆಯಿಂದಾಗಿ ರೈತರಿಗೆ ಒದಗಿಸಬೇಕಾದ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸುತ್ತಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿ ಸುಳಿರೋಗ ತಗುಲಿ, 12 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಜೋಳ ನೆಲಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಕೃಷಿ ಇಲಾಖೆ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿದ್ದು, ರೈತಾಪಿ ಜನರೂ ದಿಕ್ಕು ತೋಚದಂತಾಗಿದ್ದಾರೆ.
ಪ್ರಮುಖವಾಗಿ ಸಕಲೇಶಪುರ ಅರಕಲಗೂಡು ಬೇಲೂರು ಹೊಳೆನರಸೀಪುರ ತಾಲ್ಲೂಕಿಗೆ ಕೃಷಿ ಅಧಿಕಾರಿಗಳ ಅಗತ್ಯ ಹೆಚ್ಚಿದ್ದು ಈ ಕುರಿತು ಇಲಾಖೆಯ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆರಮೇಶ್ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಮುಖವಾಗಿರುವ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಅಧಿಕಾರಿಗಳು ಇಲ್ಲದೇ ಇದ್ದರೆ ರೈತರು ಏನು ಮಾಡಬೇಕು? ಪ್ರತಿಯೊಂದಕ್ಕೂ ಅಧಿಕಾರಿಗಳನ್ನೇ ಹೊಣೆ ಮಾಡಬಾರದು. ಸರ್ಕಾರವೂ ಹೊಣೆಗಾರಿಗೆ ನಿಭಾಯಿಸಬೇಕುಬಾಬು ರೈತ ಸಂಘಟನೆ ಮುಖಂಡ
4.96 ಲಕ್ಷ ರೈತರು:
2015-16 ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 103184 ಸಣ್ಣ 393407 ಅತಿ ಸಣ್ಣ ರೈತರು ಸೇರಿದಂತೆ ಸುಮಾರು 496591 ರೈತರಿದ್ದಾರೆ. ಇಷ್ಟು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಅಗತ್ಯಕ್ಕೆ ತಕ್ಕಂತೆ ಇಲಾಖೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ರೈತ ಸಂಘಟನೆಗಳ ಮುಖಂಡರು. 273 ಕೃಷಿ ಇಲಾಖೆ ಅಧಿಕಾರಿಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗದಿಂದ ಮುಂದಿನ ತಿಂಗಳು ಪರೀಕ್ಷೆ ನಡೆಯಲಿದ್ದು ಈ ಪ್ರಕ್ರಿಯೆ ಮುಗಿಯುವುದು ಇನ್ನೂ ಒಂದೂವರೆ ವರ್ಷ ಆಗಲಿದೆ. ಅಧಿಕಾರಿಗಳ ಕೊರತೆ ನೀಗಿಸಲು ಇಷ್ಟು ನೇಮಕಾತಿ ಸಾಲದು ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.