ADVERTISEMENT

ಹಾಸನ | ಅಂಗಾಂಶ ಕೃಷಿ: ಕುಡಿಕಂಡ ಆಲೂಗಡ್ಡೆ ಬೇಸಾಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 13:31 IST
Last Updated 11 ಜುಲೈ 2023, 13:31 IST
ಹಾಸನ ತಾಲ್ಲೂಕಿನ ಜಮೀನಿಗೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಮಹೇಶ್‌ ಭೇಟಿ ನೀಡಿ, ರೈತರಿಗೆ ಸಲಹೆ ನೀಡಿದರು.
ಹಾಸನ ತಾಲ್ಲೂಕಿನ ಜಮೀನಿಗೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಮಹೇಶ್‌ ಭೇಟಿ ನೀಡಿ, ರೈತರಿಗೆ ಸಲಹೆ ನೀಡಿದರು.   

ಹಾಸನ: ಅಂಗಾಂಶ ಕೃಷಿ 'ಕುಡಿಕಂಡ' ಆಲೂಗಡ್ಡೆ ಸಸಿಗಳನ್ನು ತಾಲ್ಲೂಕಿನ ವಿವಿಧ ರೈತರು ಪ್ರಯೋಗವಾಗಿ ಬೆಳೆಯುತ್ತಿದ್ದು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಮಹೇಶ್ ಹಾಗೂ ಇತರೆ ವಿಜ್ಞಾನಿಗಳು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎಸ್. ರವಿ ಅವರೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.

3-4 ದಿವಸಗಳಿಂದ ಮೋಡ ಕವಿದ ವಾತಾವರಣದಿಂದ ಅಂಗಮಾರಿ ರೋಗ ಬರುವ ಸಾಧ್ಯತೆ ಇರುತ್ತದೆ. ಆಲೂಗಡ್ಡೆ ನಾಟಿ ಮಾಡಿ ಈಗಾಗಲೇ 30-40 ದಿನಗಳು ಕಳೆದಿದ್ದು, ರೈತರು ಅಂಗಮಾರಿ ರೋಗದಿಂದ ಮುಂಜಾಗ್ರತೆ ಕ್ರಮಕ್ಕಾಗಿ ಮ್ಯಾಂಕೋಜೆಬ್ ಮತ್ತು ಸೈಮೋಕ್ಸಾನಿಲ್ ಸಂಯುಕ್ತವುಳ್ಳ ಔಷಧಿಯನ್ನು 3 ಗ್ರಾಮ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ಕರಿಕಡ್ಡಿ ರೋಗ ತಡೆಯಲು ಪ್ರೊಪರ್‌ ಗೈಟ್ 2 ಮಿ.ಲೀ ನೀರಿನಲ್ಲಿ ಕರಗಿಸಿ ಸಿಂಪಡಿಸಬಹುದು. ಬಿತ್ತನೆ ಮಾಡಿದ 55-60 ದಿನಗಳಲ್ಲಿ ಡೈಮಿಥೋ ಮಾರ್ಫ್ 1 ಗ್ರಾಂ ಮತ್ತು ಮ್ಯಾಂಕೋಜೆಬ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಬಿತ್ತನೆ ಮಾಡಿದ 65-70 ದಿವಸಗಳಲ್ಲಿ ಮ್ಯಾಂಕೋಜೆಬ್ ಮತ್ತು ಪೆನಾಮಿಟೋನ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಇದೇ ಸಂದರ್ಭದಲ್ಲಿ ಶುಂಠಿ ಬೆಳೆಯನ್ನು ಕೂಡ ಪರೀಶಿಲಿಸಿ, ರೈತರಿಗೆ ಮಾಹಿತಿ ನೀಡಲಾಯಿತು. ಕೊಳೆಯಲು ಆರಂಭಿಸಿರುವ ಶುಂಠಿಗೆ ಮ್ಯಾಂಕೋಜೆಬ್ ಮತ್ತು ಸೈಮೋಕ್ಸಾನಿಲ್ ಸಂಯುಕ್ತವುಳ್ಳ ಔಷಧಿಯನ್ನು 3 ಗ್ರಾಮ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ, ಬುಡಕ್ಕೆ ಬಿಡುವುದರಿಂದ ರೋಗ ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.