ADVERTISEMENT

ಅಹಿಂಸಾ ಕಲಿ ವರ್ಧಮಾನ ಮಹಾವೀರ

24ನೇ ತೀರ್ಥಂಕರ ಮಹಾವೀರ ಜಯಂತಿ ಇಂದು: ಮನೆಗಳಲ್ಲಿ ಶ್ರದ್ಧಾಭಕ್ತಿಯ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:54 IST
Last Updated 25 ಏಪ್ರಿಲ್ 2021, 4:54 IST
ಅಂತಿಮ ತೀರ್ಥಂಕರ ಭಗವಾನ್‌ ಮಹಾವೀರ
ಅಂತಿಮ ತೀರ್ಥಂಕರ ಭಗವಾನ್‌ ಮಹಾವೀರ   

ಶ್ರವಣಬೆಳಗೊಳ: ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಜೈನಧರ್ಮವೂ ಒಂದಾಗಿದ್ದು, 24 ತೀರ್ಥಂಕರರಲ್ಲಿ ವರ್ಧಮಾನ ಮಹಾವೀರ ತೀರ್ಥಂಕರ ಅಂತಿಮರು.

ಬಿಹಾರದ ವೈಶಾಲಿ ನಗರದ ಕುಂಡಲಪುರದಲ್ಲಿ ರಾಜ ಸಿದ್ಧಾರ್ಥ ತ್ರಿಶಲರ ಕುವರನಾಗಿ ಕ್ರಿಸ್ತಪೂರ್ವ 599ರಲ್ಲಿ ಜನಿಸಿದರು. ‘ಬದುಕು, ಬದುಕಲು ಬಿಡು' ಎಂಬ ಸಂದೇಶ ಸಾರಿದ ತ್ಯಾಗಿ ಜನಿಸಿ ಇಂದಿಗೆ 2,619 ವರ್ಷ.

ತೀರ್ಥಂಕರರ ಜನನದಿಂದ ಜನರಲ್ಲಿ ಸುಖ, ಶಾಂತಿ ಹಾಗೂ ರಾಜಮನೆತನದಲ್ಲಿಯೂ ಸುಖ, ಸಮೃದ್ಧಿ ವೃದ್ಧಿಸಿದವು. ಹಾಗಾಗಿಯೇ ಇವರನ್ನು ವರ್ಧಮಾನ ಎಂದು ಕರೆದರು. ಇಬ್ಬರು ಚಾರಣ ವೃದ್ಧಿಧಾರಿ ಮುನಿಗಳಿಗೆ ಬಂದ ಸಂಶಯಗಳು ಈ ಮಗುವಿನ ದರ್ಶನ ಮಾಡುತ್ತಲೇ ನಿವಾರಣೆಯಾದ್ದರಿಂದ ಮಗುವಿಗೆ ‘ಸನ್ಮತಿ’ ಎಂದು, ಭಯ ಪರೀಷಹ ದೂರ ಮಾಡಿದ್ದರಿಂದ ‘ಮಹಾವೀರ’ನೆಂದು ಹಾಗೂ ಬೆಳೆಯುತ್ತಲೇ ರಾಗ, ದ್ವೇಷ ತ್ಯಾಗ ಮಾಡಿದವರಾದುದರಿಂದ ‘ಶ್ರಮಣ’ನೆಂದು ಕರೆದರು.

ADVERTISEMENT

30ನೇ ವರ್ಷದಲ್ಲಿ ದೀಕ್ಷೆ ಪಡೆದು ಭಾರತದ ಉದ್ದಗಲಕ್ಕೂ ವಿಹಾರ ಮಾಡುತ್ತಾ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅನೇಕಾಂತ, ಅಪರೀಗ್ರಹಗಳ ಬಗ್ಗೆ ಬೋಧನೆ ಮಾಡಿದ ಈ ಆದರ್ಶ ಮಹಾಪುರುಷನ ಜನ್ಮ ಜಯಂತಿ ಏ. 25.ಕಾಡುಗಳಲ್ಲಿ ವಿಹಾರ ಮಾಡುತ್ತಾ ಘೋರ ತಪಸ್ಸು ಮಾಡಿ ಕೇವಲ ಜ್ಞಾನ ಪಡೆದು ಜನರ ಆಡು ಭಾಷೆ ಪ್ರಾಕೃತದ ಅರ್ಧಮಾಗದೀ ಭಾಷೆಯಲ್ಲಿ ಧರ್ಮೋಪದೇಶ ಮಾಡಿದರು.

ಮೊದಲಿನಿಂದಲೂ ಸಂಯಮ, ವ್ರತಶೀಲರಾಗಿದ್ದರು. ಮೇಲು–ಕೀಳು ಭಾವನೆ ಇರಲಿಲ್ಲ. ಯಾವಾಗಲೂ ಜನತೆಗೆ ಕಲ್ಯಾಣ ಮಾರ್ಗ ತೋರಿಸುತ್ತಾ, ಪರಿಪಾಲಿಸಬೇಕೆಂದು ಪ್ರಯತ್ನಿಸುತ್ತಿದ್ದರು. ಇವರ ಧರ್ಮ ಸಭೆಗಳಿಗೆ ಕಿಕ್ಕಿರಿದು ಜನರು ಭಾಗವಹಿಸುತ್ತಿದ್ದರು.

ಮನುಷ್ಯ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತ ತನ್ನ ಆತ್ಮನ ವೈರಿಗಳಾದ ಕಷಾಯಗಳ ಹಾಗೂ ಇಂದ್ರೀಯಗಳ ಮೇಲೆ ಜಯ ಸಾಧಿಸುವುದು ಸರ್ವ ಶ್ರೇಷ್ಠ ಎನ್ನುತ್ತಿದ್ದರು. ಸ್ವಾರ್ಥ, ಆಸೆ, ಆಮಿಷಗಳಿಗೆ ಬಲಿಯಾಗಿ ಮನುಷ್ಯನಿಂದಾಗುವ ಅನ್ಯಾಯ, ಅನೀತಿ ತಡೆಯಬೇಕು ಎಂದು ಹೇಳುತ್ತಿದ್ದರು. ಸಮ್ಯಕ್‌ ದರ್ಶನ, ಸಮ್ಯಕ್‌ ಜ್ಞಾನ, ಸಮ್ಯಕ್‌ ಚಾರಿತ್ರ ಇವುಗಳನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷ ಮಾರ್ಗಕ್ಕೆ ಸಾಧನಗಳು ಎಂದರು.

ಬಿಹಾರ ರಾಜ್ಯದ ರಾಜಗೃಹದ ವಿಪುಲಾಚಲದಲ್ಲಿ ಮಹಾವೀರರ ಪ್ರಥಮ ಸಮವಸರಣ ನಡೆಯಿತು. ಪಾವಾಪುರಿಯಲ್ಲಿ ಕ್ರಿಸ್ತಪೂರ್ವ 527ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿ ಮುಕ್ತಿ (ಮೋಕ್ಷ ) ಹೊಂದಿದರು. ಮಹಾವೀರರನ್ನು ಸಿಂಹಲಾಂಛನದಿಂದ ಗುರುತಿಸಬಹುದು.

‘ದೇಶವ್ಯಾಪ್ತಿ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮಹಾವೀರ ಸ್ವಾಮಿಯ 2620ನೇ ಜನ್ಮ ಜಯಂತಿ ಕೋವಿಡ್‌ 19 ಕಾರಣಕ್ಕೆ ಭಕ್ತರು ತಮ್ಮ ಮನೆಗಳಲ್ಲಿಯೇ ಅರ್ಥಪೂರ್ಣವಾಗಿ ಆಚರಿಸುವಂತಾಗಿದೆ’ ಎಂದು ಪ್ರೊ.ಜೀವಂಧರ್‌ಕುಮಾರ್‌ ಹೊತಪೇಟೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.