ADVERTISEMENT

‘ಹಿಜಾಬ್‌: ಕೋರ್ಟ್‌ ತೀರ್ಪಿಗೆ ಬದ್ಧರಾಗಬೇಕು’: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 16:23 IST
Last Updated 15 ಮಾರ್ಚ್ 2022, 16:23 IST
ಹಾಸನಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಖಂಡರು ಸ್ವಾಗತಿಸಿದರು. ಹುಲ್ಲಹಳ್ಳಿ ಸುರೇಶ್, ಚನ್ನಕೇಶವ, ಎಚ್.ಎನ್.ನಾಗೇಶ್, ಐನೆಟ್ ವಿಜಯಕುಮಾರ್ ಇದ್ದರು.
ಹಾಸನಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಖಂಡರು ಸ್ವಾಗತಿಸಿದರು. ಹುಲ್ಲಹಳ್ಳಿ ಸುರೇಶ್, ಚನ್ನಕೇಶವ, ಎಚ್.ಎನ್.ನಾಗೇಶ್, ಐನೆಟ್ ವಿಜಯಕುಮಾರ್ ಇದ್ದರು.   

ಹಾಸನ: ‘ಹಿಜಾಬ್ ವಿಚಾರದಲ್ಲಿ ಹೈಕೋಟ್ ಪೂರ್ಣ ಪೀಠ ನೀಡಿರುವ ತೀರ್ಪಿಗೆ ಎಲ್ಲರೂ ಬದ್ಧರಾಗಿಬೇಕು’ ಎಂದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿಜಾಬ್ ವಿಚಾರ ಇಟ್ಟುಕೊಂಡು ರಾಜ್ಯದ ಶಿಕ್ಷಣ ಕ್ಷೇತ್ರದ ವಾತಾವರಣ ಕಲುಷಿತಗೊಳಿಸುವ ಪ್ರಯತ್ನ ನಡೆಯುತ್ತಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಬೇಕೆಂಬ ಹುನ್ನಾರ ಕೆಲವು ದುಷ್ಟ ಶಕ್ತಿಗಳ ಗುರಿಯಾಗಿತ್ತು. ಈಗ ಅದಕ್ಕೆ ತಡೆ ಬಿದ್ದಿದೆ. ಮುಂದಾದರೂ ಇದನ್ನು ಅರ್ಥ ಮಾಡಿಕೊಂಡು ಈ ರೀತಿಯ ದುಸ್ಸಾಹಸಕ್ಕೆ ಕೈಹಾಕುವುದನ್ನು ಕೆಲವರು ಬಿಡಬೇಕು’ ಎಂದರು.

‘ಸುದೀರ್ಘ ವಿಚಾರಣೆ ನಂತರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಕೆಲವರು ಹೇಳಿದ್ದಾರೆ. ಅಲ್ಲೂ ಜಯ ಸಿಗುವ ವಿಶ್ವಾಸವಿದೆ’ ಎಂದು ನುಡಿದರು.

ADVERTISEMENT

‘ಹಿಜಾಬ್ ಹೆಸರಿನಲ್ಲಿ ಧರ್ಮದ ಗೊಂದಲ ಮೂಡಿಸಿ ಶಿಕ್ಷಣ ವ್ಯವಸ್ಥೆ ಕುಲಷಿತಗೊಳಿಸುವ ಕೋಮುವಾದಿ ಪ್ರಯತ್ನಕ್ಕೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿ ಸರ್ಕಾರದ ನೀತಿ ಎತ್ತಿ ಹಿಡಿದಿದೆ. ಈ ನೆಲದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದು ತಿಳಿಸಿದರು.

‘ಕೆಲವರು ಹತಾಶೆಯಿಂದ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಯಾರು ಏನೇ ಮಾತನಾಡಿದರೂ, ಉತ್ತರ ಭಾರತದ ಚುನಾವಣೆಯಿಂದ ಉತ್ಸಾಹ ಹೆಚ್ಚಿದೆ. ಕಾಂಗ್ರೆಸ್‌ನವರು ಬಿಜೆಪಿಯಲ್ಲಿ ಒಡಕಿದೆ ಎನ್ನುತ್ತಿದ್ದಾರೆ. ಅವರ ಈ ಹೇಳಿಕೆ ಹತಾಶೆಯನ್ನು ತೋರಿಸುತ್ತದೆ’ ಎಂದು ಟಾಂಗ್ ನೀಡಿದರು.

‘ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ನಾಯಕರುಕಂಗಾಲಾಗಿದ್ದಾರೆ. ನಾಳೆ ಚುನಾವಣೆ ನಡೆದರೂ ಎದುರಿಸಲು ಸಿದ್ಧರಿದ್ದೇವೆ. ಆದರೆ ಈ ಪ್ರಶ್ನೆಗೆ ಕಾಂಗ್ರೆಸ್‍ನವರಿಂದ ಉತ್ತರ ಬರುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೂ ಹೊಂದಾಣಿಕೆಮಾಡಿಕೊಳ್ಳುವುದಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೂಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ’ ಎಂದರು.

‘ಸಚಿವ ಸಂಪುಟ ಪುನಾರಚನೆ ಕುರಿತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ. ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಮುಖಂಡರಾದ ಚನ್ನಕೇಶವ, ಎಚ್.ಎನ್.ನಾಗೇಶ್, ಐನೆಟ್ ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.