ADVERTISEMENT

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಕೋರ್ಟ್ ಮೊರೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 14:07 IST
Last Updated 16 ಫೆಬ್ರುವರಿ 2025, 14:07 IST

ಹಾಸನ: ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಫಲಿತಾಂಶದ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಯುವ ಮುಖಂಡ ಪ್ರವೀಣ್ ಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ 14 ಸಾವಿರಕ್ಕೂ ಹೆಚ್ಚು ಮತಗಳು ನಮ್ಮ ತಂಡಕ್ಕೆ ಬರಬೇಕಾಗಿತ್ತು. ಆದರೆ ಚುನಾವಣೆ ಫಲಿತಾಂಶದಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಹೈಕಮಾಂಡ್‌ಗೆ ಪತ್ರ ಬರೆಯಲಾಗಿದೆ ಎಂದರು.

ಹಲವಾರು ತಿಂಗಳಿನಿಂದ ಕಾಂಗ್ರೆಸ್ ಪಕ್ಷಕ್ಕೆ ಯುವ ಸದಸ್ಯರನ್ನು ಸೇರಿಸಲಾಗಿದೆ. ಮತದಾನದ ವೇಳೆ ನಮ್ಮ ಬೆಂಬಲಿಗರು ಶ್ರಮಿಸಿ, ನಮ್ಮ ತಂಡಕ್ಕೆ ಮತ ಹಾಕಿಸಿದ್ದಾರೆ. ಆದರೂ ಚುನಾವಣೆಯಲ್ಲಿ ನಮಗೆ ಸೋಲುಂಟಾಗಿದ್ದು, ಅಕ್ರಮ ನಡೆದಿದೆ ಎಂಬ ಅನುಮಾನವಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿದ್ದೇವೆ. ಮರು ಚುನಾವಣೆಗೆ ಆಗ್ರಹಿಸಿದ್ದೇವೆ ಎಂದು ಹೇಳಿದರು.

ADVERTISEMENT

ಆನ್‌ಲೈನ್ ಮೂಲಕ ಚುನಾವಣೆ ನಡೆಸಲಾಗಿದ್ದು, ಫಲಿತಾಂಶವನ್ನು ಒಂದೆರಡು ದಿನದಲ್ಲಿಯೇ ಬಿಡುಗಡೆ ಮಾಡಬಹುದಾಗಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಈ ರೀತಿ ಚುನಾವಣೆಯಲ್ಲಿ ಆಕ್ರಮ ನಡೆದರೆ, ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟಾಗಲಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮುಖಂಡರು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದರ್ಶನ್, ಕಾಂತರಾಜು, ಅನಂತ್ ಕುಮಾರ್, ಮನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.