ADVERTISEMENT

ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲು ಮನವಿ

ಜಿಲ್ಲಾಡಳಿತಕ್ಕೆ ಮಾವನೂರು ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 16:17 IST
Last Updated 10 ಜನವರಿ 2022, 16:17 IST
ಹಾಸನ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಹೊಳೆನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿ ಮಾವನೂರು ಗ್ರಾಮಸ್ಥರು ಮನವಿ ಸಲ್ಲಿಸಿದರು
ಹಾಸನ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಹೊಳೆನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿ ಮಾವನೂರು ಗ್ರಾಮಸ್ಥರು ಮನವಿ ಸಲ್ಲಿಸಿದರು   

ಹಾಸನ: ಆಂಜನೇಯ ದೇವಸ್ಥಾನ ಪ್ರವೇಶಕ್ಕೆ ಪರಿಶಿಷ್ಟರಿಗೂ ಅವಕಾಶ ಕಲ್ಪಿಸುವ ಜತೆಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಹೊಳೆನರಸೀಪುರ ತಾಲ್ಲೂಕಿನ ಮಾವನೂರು ಗ್ರಾಮಸ್ಥರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಸಮುದಾಯದವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದರು. ಡಿ. 29ರ ರಾತ್ರಿಮಾವನೂರು ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು ಗ್ರಾಮದ ಆಂಜನೇಯ ಹಾಗೂಪಂಚಲಿಂಗೇಶ್ವರ ದೇವಸ್ಥಾನದ ಹೊರಗಡೆ ಪೂಜೆ ಮಾಡಿದ ಕಾರಣಕ್ಕೆ ಜಾತಿ ನಿಂದನೆಮಾಡಿ, ದೇವಸ್ಥಾನದ ಪ್ರವೇಶ ನಿರಾಕರಿಸಲಾಗಿದೆ ಎಂದು ಪ್ರತಿಭಟನಾಕಾರರು
ದೂರಿದರು.

‘ತಾತನ ಕಾಲದಿಂದಲೂ ದೇವಸ್ಥಾನದ ಒಳಗೆ ಬರುವಂತಿಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಪರಿಶಿಷ್ಟ ಜಾತಿಯ ರವಿ, ಲತಾ, ಮಂಗಳಮ್ಮ ಮತ್ತು ನಂಜಮ್ಮ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಹೋಗಿ ಬಂದ ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದು,
ಕಾನೂನು ಕ್ರಮ ಕೈಗೊಂಡು ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸತೀಶ್, ಮಾನವ ಹಕ್ಕುಗಳಹೋರಾಟಗಾರ ಮರಿಜೋಸೆಫ್‌ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.