ADVERTISEMENT

ಆಲೂರು | ಸುಸಜ್ಜಿತ ರಸ್ತೆ, LED ದಾರಿದೀಪ: ಸೌಂದರ್ಯೀಕರಣಕ್ಕೆ ಮುಂದಾದ ಪಂಚಾಯಿತಿ

ಎಂ.ಪಿ.ಹರೀಶ್
Published 11 ಅಕ್ಟೋಬರ್ 2025, 4:33 IST
Last Updated 11 ಅಕ್ಟೋಬರ್ 2025, 4:33 IST
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಚರಂಡಿ ಅಂಚಿನಿಂದ ಚರಂಡಿವರೆಗೆ ಕಾಂಕ್ರೀಟ್ ರಸ್ತೆ ಮಾಡುತ್ತಿರುವುದು
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಚರಂಡಿ ಅಂಚಿನಿಂದ ಚರಂಡಿವರೆಗೆ ಕಾಂಕ್ರೀಟ್ ರಸ್ತೆ ಮಾಡುತ್ತಿರುವುದು   

ಆಲೂರು: ಪಟ್ಟಣ ಪಂಚಾಯಿತಿ ಹಲವು ವಾರ್ಡ್‌ಗಳಿಗೆ ಸಿಮೆಂಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಜೊತೆಗೆ ಪಟ್ಟಣದ ಸೌಂದರ್ಯೀಕರಣಕ್ಕೆ ಹಲವು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

4 ನೇ ವಾರ್ಡ್‌ನಲ್ಲಿ 50 ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು, ಸುಮಾರು 500 ಜನರು ಪ್ರತಿದಿನ ಓಡಾಡುತ್ತಾರೆ. ಈವರೆಗೂ ಮಣ್ಣಿನ ರಸ್ತೆಗಳಲ್ಲೇ ಜನರು ಮತ್ತು ವಾಹನಗಳು ಓಡಾಡುತ್ತಿದ್ದವು. ಪ್ರತಿ ವರ್ಷ ಮಳೆಗಾಲದಲ್ಲಿ ಓಡಾಡಲು ತೊಂದರೆಯಾಗಿತ್ತು. ರಸ್ತೆ, ಚರಂಡಿ ದುರಸ್ತಿ ಮಾಡುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಲಾಗಿತ್ತು.

ಈಗ 15 ನೇ ಹಣಕಾಸು ಯೋಜನೆ ಮತ್ತು ರಾಜ್ಯ ಹಣಕಾಸು ಯೋಜನೆಯಡಿ ಸುಮಾರು ₹27 ಲಕ್ಷ ವೆಚ್ಚದಲ್ಲಿ ಅಗತ್ಯವಿರುವ ವಾರ್ಡ್‌ಗಳಲ್ಲಿ ಗುಣಮಟ್ಟದ ಸಿಮೆಂಟ್ ರಸ್ತೆ, ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ADVERTISEMENT

ವಿಶೇಷವೆಂದರೆ, ಈವರೆಗೆ ಎಲ್ಲೆಡೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ 10 ಅಡಿ ಅಗಲದ ಬಾಕ್ಸ್ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಈಗ ಸ್ಥಳೀಯರ ಕೋರಿಕೆಯಂತೆ ರಸ್ತೆಯ ಎರಡೂ ಚರಂಡಿವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಮುಂದಾಗಬಹುದಾದ ಅನಾಹುತ ತಪ್ಪಿಸಲಾಗಿದೆ.

ಕಾಂಕ್ರೀಟ್ ಬಾಕ್ಸ್ ರಸ್ತೆ ನಿರ್ಮಾಣ ಮಾಡಿದರೆ, ರಸ್ತೆಯಂಚಿನಲ್ಲಿ ಸುಮಾರು ಒಂದು ಅಡಿ ಆಳವಾದ ಖಾಲಿ ಜಾಗ ಉಳಿಯುತ್ತಿದ್ದು. ಅಂತಹ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಹಲವು ಬಾರಿ ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿದ್ದಾರೆ.

ಸ್ಥಳೀಯರು ವಿಷಯವನ್ನು ಪಟ್ಟಣ ಪಂಚಾಯಿತಿ ಗಮನ ತಂದಿದ್ದು, ಸ್ಥಳೀಯರಿಗೆ ತೊಂದರೆ ಆಗದಂತೆ ರಸ್ತೆ ನಿರ್ಮಾಣ ಮಾಡಲು ಅಧ್ಯಕ್ಷರು, ಮುಖ್ಯಾಧಿಕಾರಿ, ಎಂಜಿನಿಯರ್ ಮತ್ತು ಸದಸ್ಯರು, ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

ಚರಂಡಿಯಿಂದ ಚರಂಡಿವರೆಗೆ ಜಾಗ ಖಾಲಿ ಬಿಡದಂತೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೆ ಉತ್ತಮ. ರಸ್ತೆಗೆ ಅಂದಾಜುಪಟ್ಟಿ ತಯಾರು ಮಾಡುವಾಗ ರಸ್ತೆ ಅಗಲ ಸೇರಿಸಿ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವಾಗ ರಸ್ತೆ ಅಗಲಪೂರ್ಣ ಮಾಡಿದರೆ ಅಪಘಾತ ತಪ್ಪಿಸಬಹುದು. ಜನರ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ
-ತಾಹೀರಾ ಬೇಗಂ, ಆಲೂರು ಪ.ಪಂ. ಅಧ್ಯಕ್ಷೆ
ಮುಖ್ಯ ರಸ್ತೆ ವಿಭಜಕದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಎಲ್ಇಡಿ ದಾರಿದೀಪಗಳು ಉರ್ದು ಶಾಲೆ ಮುಂಭಾಗ ಪಟ್ಟಣ ಪಂಚಾಯಿತಿಯಿಂದ ಬಿಇಒ ಕಚೇರಿವರೆಗೆ ರಸ್ತೆಯಂಚಿಗೆ ಇಂಟರ್‌ಲಾಕ್ ಹಾಕಲಾಗುವುದು
-ಮಂಜುನಾಥ್ ಆಲೂರು ಪ.ಪಂ. ಮುಖ್ಯಾಧಿಕಾರಿ
ತಾಲ್ಲೂಕು ಕೇಂದ್ರವೆಂದರೆ ಸುಸಜ್ಜಿತ ರಸ್ತೆ ಚರಂಡಿ ದಾರಿದೀಪ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಿರಬೇಕು. ಸಂಚಾರ ಸುರಕ್ಷತೆ ಕಾಪಾಡಬೇಕು. ಪಟ್ಟಣದ ಸೌಂದರ್ಯೀಕರಣಕ್ಕೆ ಮುಂದಾಗಿರುವುದು ಸಂತಸ
-ಮೋಹನ್ ನಾಲ್ಕನೇ ವಾರ್ಡ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.