ADVERTISEMENT

ಆಲೂರು | ಅದೃಷ್ಟದ ಬೆಳೆಗೆ ಆವರಿಸಿದ ರೋಗ ಬಾಧೆ

ಶುಂಠಿಗೆ ಕಾಡುತ್ತಿದೆ ಎಲೆ ಚುಕ್ಕಿ ರೋಗ: ರೈತರಿಗೆ ನಷ್ಟದ ಆತಂಕ

ಎಂ.ಪಿ.ಹರೀಶ್
Published 10 ಸೆಪ್ಟೆಂಬರ್ 2025, 5:31 IST
Last Updated 10 ಸೆಪ್ಟೆಂಬರ್ 2025, 5:31 IST
ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಜಮೀನಿನಲ್ಲಿ ರೋಗಕ್ಕೆ ತುತ್ತಾದ ಶುಂಠಿ
ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಜಮೀನಿನಲ್ಲಿ ರೋಗಕ್ಕೆ ತುತ್ತಾದ ಶುಂಠಿ   

ಆಲೂರು: ಅದೃಷ್ಟದ ಬೆಳೆ ಎಂದೆ ಖ್ಯಾತಿ ಪಡೆದಿರುವ, ಅಧಿಕ ವೆಚ್ಚ ಭರಿಸಿ ಬೆಳೆಯಲಾಗುವ ಶುಂಠಿ ಬೆಳೆಗೆ ಬೆಂಕಿ ರೋಗ, ಕೊಳೆ ರೋಗ ಮತ್ತು ಮಹಾಕಾಳಿ ರೋಗದಂತಹ ಮಾರಕ ಕಾಯಿಲೆ ಆವರಿಸುತ್ತಿದ್ದು, ಇದೀಗ ಈ ಸಾಲಿಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಕೊಡಗು, ಚಿಕ್ಕಮಗಳೂರು ಭಾಗಗಳಲ್ಲಿ ಕಂಡು ಬರುತ್ತಿದ್ದ ರೋಗ, ಈ ವರ್ಷ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವುದು ರೈತರಿಗೆ ಶಾಪವಾಗಿ ಪರಿಣಮಿಸಿದೆ. ಎರಡು ತಿಂಗಳಿನಿಂದ ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದ ವಿಪರೀತ ತೇವಾಂಶ ಉಂಟಾಗಿದ್ದು, ಹಲವು ರೋಗಗಳು ಉಲ್ಬಣವಾಗುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ.

ರಭಸ ಮಳೆಯಾಗಿ ಬಿಸಿಲು ವಾತಾವರಣವಾಗಿದ್ದರೆ, ಎಂತಹ ರೋಗವಿದ್ದರೂ ನಾಶವಾಗುತ್ತಿತ್ತು. ರಭಸ ಮಳೆಗೆ ಮಾತ್ರ ಗಿಡಗಳಲ್ಲಿರುವ ಕೀಟಗಳು ನಾಶವಾಗುತ್ತವೆ. ತೇವಾಂಶ ಇದ್ದರೆ, ಕೀಟಗಳ ಸಂತಾನ ವೃದ್ಧಿಯಾಗಿ ಬೆಳೆ ನಾಶವಾಗುತ್ತದೆ. ಮಳೆ ಮತ್ತು ತೇವಾಂಶ ಇರುವುದರಿಂದ ಬಲಿಷ್ಠ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬಾರದೇ ರೈತರು ಕಂಗಾಲಾಗಿದ್ದಾರೆ.

ADVERTISEMENT

ರೋಗ ಲಕ್ಷಣ:

ಶುಂಠಿ ಎಲೆಗಳ ಮೇಲೆ ಕಾಣಿಸಿಕೊಳ್ಳುವ ಕಂದು ಮಿಶ್ರಿತ ಬಿಳಿ ಚುಕ್ಕಿಗಳು ಕ್ರಮೇಣ ಎಲ್ಲ ಎಲೆಗಳಿಗೂ ಹಬ್ಬುತ್ತದೆ. ರೋಗ ಬಾಧಿತ ಶುಂಠಿಯ ದಂಟುಗಳಲ್ಲಿ ಚಿಕ್ಕ ಚಿಕ್ಕ ಕಪ್ಪು ಕಲೆಗಳು ನಿರ್ಮಾಣಗೊಂಡು ಶುಂಠಿ ಬೆಳವಣಿಗೆ ನಿಯಂತ್ರಿಸಿ, ಬೆಳೆಯನ್ನು ಕೃಶಗೊಳಿಸುತ್ತದೆ. ಮೊದಲು ಕೆಲವು ಗಿಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ರೋಗ, ಕೆಲವೇ ದಿನಗಳಲ್ಲಿ ಬೆಳೆ ಪ್ರದೇಶದ ತುಂಬೆಲ್ಲ ವೇಗವಾಗಿ ಆವರಿಸಿಕೊಂಡು ಬಾಧಿಸುತ್ತದೆ.

ಎಲೆಚುಕ್ಕಿ ರೋಗವು ಶಿಲಿಂಧ್ರದಿಂದ ಬರುತ್ತಿದ್ದು, ಸೂಕ್ಷ್ಮಾಣುಗಳು ಎಲೆಯ ಹರಿತ್ತನ್ನು ಸಂಪೂರ್ಣವಾಗಿ ಭಕ್ಷಿಸಿ, ರಸವನ್ನು ಹಿರುತ್ತವೆ. ಇದರಿಂದ ಬಿಳಿಚಿಕೊಂಡ ಬೆಳೆ, ತನ್ನ ಆಹಾರ ತಯಾರಿಸಲಾಗದೆ ನಿತ್ರಾಣಗೊಂಡು ಒಣಗಲು ಆರಂಭಿಸುತ್ತದೆ. ನಂತರ ಕೊಳೆರೋಗಕ್ಕೆ ತುತ್ತಾಗುತ್ತದೆ. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡದಿದ್ದರೆ ರೈತರು ನಷ್ಟ ಅನುಭವಿಸುವ ಅಪಾಯವಿದೆ.

ಎರಡು ದಶಕಗಳಿಂದ ಶುಂಠಿ ಬೆಳೆ ರೈತರಿಗೆ ಆರ್ಥಿಕವಾಗಿ ಶಕ್ತಿ ನೀಡಿತ್ತು. 2–3 ವರ್ಷಗಳಿಂದ ಶುಂಠಿ ಹಲವು ರೋಗಗಳಿಂದ ನಲುಗುತ್ತಿದೆ. ಬೆಳೆ ಸಂಪೂರ್ಣ ನೆಲಕಚ್ಚಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.
ಎಚ್.ಬಿ. ಧರ್ಮರಾಜ್ ಹುಣಸವಳ್ಳಿ ರೈತ

ಪ್ರತಿಕೂಲ ಹವಾಮಾನ ‘ಶುಂಠಿಯೂ ಸಮಶೀತೋಷ್ಣ ಹವಾಮಾನದಲ್ಲಿ ಉತ್ತಮವಾಗಿ ಬರುವ ಬೆಳೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆ ಕಡಿಮೆ ತಾಪಮಾನದಿಂದಾಗಿ ಚುಕ್ಕಿ ರೋಗ ಉಲ್ಬಣಗೊಂಡಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೇಶವ್ ತಿಳಿಸಿದರು. ರೈತರು ಮುಂಜಾಗ್ರತೆಯಿಂದ ಹತೋಟಿ ಕ್ರಮಗಳನ್ನು ಅನುಸರಿಸಿದಲ್ಲಿ ಶುಂಠಿ ಬೆಳೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ. ಶೀಲಿಂಧ್ರ ನಾಶಕವಾದ ಸಿಒಸಿ 3 ಗ್ರಾಂ 1 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.