
ಹೆತ್ತೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸರ್ಕಾರ ಮೂರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಶುಕ್ರವಾರ ಹೆತ್ತೂರಿನಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಹೊಸಕೋಟೆ ಹೋಬಳಿ ಕೇಂದ್ರ, ಆಲೂರು ತಾಲ್ಲೂಕು ಅಬ್ಬನ ಗ್ರಾಮ ಪಂಚಾಯಿತಿ ಹಾಗೂ ಹೆತ್ತೂರು ಹೋಬಳಿ ಕೇಂದ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.
ಹೆತ್ತೂರು ಹೋಬಳಿ ರಾಜ್ಯ ಮತ್ತು ಜಿಲ್ಲಾ ರಾಜಕಾರಣವನ್ನು ನಿರ್ಧರಿಸುವಷ್ಟು ಮಟ್ಟಕ್ಕೆ ಗುರುತಿಸಿಕೊಂಡಿರುವ ಹೋಬಳಿ. ಇಲ್ಲಿ ಬೆಳೆಗಾರರ ಸಂಘ, ದಲಿತ ಹೋರಾಟಗಾರರು ಹಾಗೂ ಪ್ರಗತಿಪರ ರೈತರು, ಹೈಕೋರ್ಟ್ ನ್ಯಾಯಾಧೀಶರಿದ್ದಾರೆ ಎನ್ನುವುದು ಹೆಮ್ಮೆ ವಿಚಾರ. ಇಲ್ಲಿನ ಅಂಬೇಡ್ಕರ್ ಭವನ ನಿರ್ಮಾಣ ಆಗಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಕನಸಾಗಿತ್ತು. ಅದರಂತೆ ಸುಮಾರು ₹ 75 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಮತದಾರರು ನೀಡಿದ ಮತವನ್ನು ದುರ್ಬಳಕೆ ಮಾಡದೇ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಸಮಸ್ಯೆಗಳು, ಕಾಡಾನೆ ಹಾವಳಿ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಾಫಿ ಬೆಳೆಗಾರರು ಹಾಗೂ ರೈತರಿಗೆ ಆಗಿರುವ ನಷ್ಟದ ಕುರಿತು ಕ್ಷೇತ್ರದ ಜನರ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ ಎಂದರು.
ಕ್ಷೇತ್ರಕ್ಕೆ ಸರ್ಕಾರದಿಂದ ಬರಬೇಕಾಗಿರುವ ಅನುದಾನವನ್ನು ಯಾವುದೇ ರಾಜಿಗೆ ಒಳಗಾಗದೇ ತರುವ ಕೆಲಸ ಮಾಡುತ್ತೇನೆ. ಬಯಲು ಸೀಮೆಗೆ ನೀರು ಎತ್ತುವ ಎತ್ತಿನಹೊಳೆ ಯೋಜನೆ ಬಹುಪಾಲು ಕಾಮಗಾರಿ ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆದಿದೆ. ಆದರೆ ನಾನು ಶಾಸಕನಾಗಿ ಎರಡು ವರ್ಷ ಕಳೆದರೂ ಅನುದಾನ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಅದರಂತೆ ಇದೀಗ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಕ್ಷೇತ್ರದಾದ್ಯಂತ ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಅನುಸೂಯ, ಹೊಂಗಡಹಳ್ಳ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ, ಕೆಆರ್‌ಡಿಐಎಲ್ ಎಂಜಿನಿಯರ್ ಅಣ್ಣಯ್ಯ, ಕೆಡಿಪಿ ನಾಮನಿರ್ದೇಶುತ ಸದಸ್ಯ ಕೋಮಾರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಬೆಳಗೋಡು ಕೃಷಿ ಪತ್ತಿನ ಅಧ್ಯಕ್ಷ ಬಸವರಾಜ್, ಯಸಳೂರು ವಲಯ ಅರಣ್ಯ ಅಧಿಕಾರಿ ರೇವಣ್ಣ ಸಿದ್ದಯ್ಯ ಹಿರೇಮಠ, ಹೆತ್ತೂರು ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ನ್ಯಾಯಯುತ ಪರಿಹಾರ ದೊರಕಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ.
-ಸಿಮೆಂಟ್ ಮಂಜು
ಕಮಿಷನ್: ನಡೆಯದ ಗುಣಮಟ್ಟದ ಕಾಮಗಾರಿ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಹಾವಳಿಯಿಂದ ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಶೇ 40-50 ಕಮಿಷನ್ ಕೊಡಲೇಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ನಡೆಸುವುದಾದರೂ ಹೇಗೆ ಎಂದು ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು. ಈ ಸಮಾಜ ಸತ್ಯ ಮತ್ತು ಶಾಂತಿಯ ಮೇಲೆ ಅವಲಂಬನೆಯಾಗಿದ್ದು ಜನರು ಮರೆತರೆ ಇವುಗಳನ್ನು ಸಮಾಜ ಉಳಿಯುವುದಿಲ್ಲ ಎಂದ ಅವರು ನಾನು ಶಾಸಕನಾಗಿದ್ದಾಗ ಆರಂಭಿಸಿದ್ದ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಸಮಯದಲ್ಲೂ ರಾಜಕೀಯ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹ 25 ಸಾವಿರ ನೀಡುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.