ಆಲೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ತುರ್ತು ಚಿಕಿತ್ಸೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡಲೇ ಆಂಬುಲೆನ್ಸ್ ಒದಗಿಸುವಂತೆ ಜನರು ಒತ್ತಾಯಿಸಿದ್ದಾರೆ.
ತಾಲ್ಲೂಕು ಸುಮಾರು 260 ಗ್ರಾಮಗಳನ್ನು ಹೊಂದಿದ್ದು, ಆಲೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರ ಆಂಬುಲೆನ್ಸ್ ಸೇವೆ ಇದೆ. ರಾಯರಕೊಪ್ಪಲು ಗ್ರಾಮ, ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ. ರಾಯರಕೊಪ್ಪಲು ಉಪ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 100 ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತವೆ. ಕಾಫಿ ಬೆಳೆಯುವ ಪ್ರದೇಶವಾಗಿರುವುದರಿಂದ ಬಹುತೇಕ ಕೃಷಿ ಕಾರ್ಮಿಕರು ಇಲ್ಲಿ ವಾಸವಾಗಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಹೃದಯಾಘಾತದಂತ ಸಮಸ್ಯೆಗೆ ತುತ್ತಾದರೆ, ಕನಿಷ್ಠ ರಾಯರಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಯನ್ನು ಕರೆತರಲು ಆಂಬುಲೆನ್ಸ್ ಅಗತ್ಯವಾಗಿದೆ.
ಆಲೂರಿನಿಂದ ರಾಯರಕೊಪ್ಪಲು ವ್ಯಾಪ್ತಿಗೆ ಆಂಬುಲೆನ್ಸ್ ಹೋಗಲು ಮುಕ್ಕಾಲು ಗಂಟೆ, ಅಲ್ಲಿಂದ ವಾಪಸು ಹಾಸನಕ್ಕೆ ಬರಲು ಒಂದು ಕಾಲು ಗಂಟೆ ಬೇಕಾಗುತ್ತದೆ. ರೋಗಿ ಬದುಕುಳಿಯುವುದು ಅಸಾಧ್ಯ. ರಾಯರಕೊಪ್ಪಲಿನಲ್ಲಿ ಆಂಬುಲೆನ್ಸ್ ಇದ್ದರೆ, ಒಂದು ಗಂಟೆಯೊಳಗೆ ಹಾಸನಕ್ಕೆ ಬರಬಹುದು. ಆದ್ದರಿಂದ ರಾಯರಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸಬೇಕು ಎನ್ನುವುದು ಜನರ ಒತ್ತಾಯ.
ಗುರುವಾರ ಕಲ್ಲಾರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟಿದ್ದು, ಆಂಬುಲೆನ್ಸ್ ಸೌಕರ್ಯ ಇದ್ದಿದ್ದರೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡಲು ಅವಕಾಶವಿತ್ತು ಎಂಬ ಅಭಿಪ್ರಾಯ ಕುಟುಂಬದ ಸದಸ್ಯರದ್ದಾಗಿದೆ.
ವ್ಯಕ್ತಿ ಹೃದಯಾಘಾತಕ್ಕೊಳಗಾದ ಒಂದು ಗಂಟೆಯೊಳಗೆ ಎಕೋ, ಟಿಎಂಟಿ ಪರೀಕ್ಷೆ ಮಾಡಬೇಕು. ಕೂಡಲೇ ಸೂಕ್ತ ಚಿಕಿತ್ಸೆ ದೊರಕಿದರೆ ಬದುಕುಳಿಯುವ ಸಾಧ್ಯತೆ ಇದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಆಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಇಸಿಜಿ ವ್ಯವಸ್ಥೆ ಮಾತ್ರ ಇದೆ.
ತಾಲ್ಲೂಕಿನ ರಾಯರಕೊಪ್ಪಲು ಅರೋಗ್ಯ ಉಪ ಕೇಂದ್ರಕ್ಕೆ ಆಂಬುಲೆನ್ಸ್ ನೀಡಬೇಕು. ಹೃದಯಾಘಾತ ಘಟನೆಗಳು ಹೆಚ್ಚಾಗುತ್ತಿದ್ದು ಸರ್ಕಾರ ಕೂಡಲೆ ಸಾವಿಗೆ ಕಾರಣ ಏನು ಎಂಬುದರ ತನಿಖೆ ನಡೆಸಬೇಕುಎಚ್.ಕೆ. ಕುಮಾರಸ್ವಾಮಿ ಮಾಜಿ ಸಚಿವ
ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ರಾಯರಕೊಪ್ಪಲು ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಆಂಬುಲೆನ್ಸ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕೂಡಲೇ ಆಂಬುಲೆನ್ಸ್ ಸೇವೆ ಒದಗಿಸಬೇಕುಕೆ.ಎಸ್. ಮಂಜೇಗೌಡ ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷ
ರಾಯರಕೊಪ್ಪಲು ಪ್ರಾಥಮಿಕ ಉಪ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸಲು ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗುವುದು. ಕೂಡಲೆ ಸುಸಜ್ಜಿತ ಆಂಬುಲೆನ್ಸ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದುಡಾ. ಅನಿಲ್ ಜಿಲ್ಲಾ ಆರೋಗ್ಯಾಧಿಕಾರಿ
ಪ್ರತಿ ಹೋಬಳಿ ಕೇಂದ್ರಗಳಿಗೆ ತಲಾ ಒಂದು ಆಂಬುಲೆನ್ಸ್ 108 ವಾಹನಗಳ ಸಂಖ್ಯೆ ಹೆಚ್ಚಿಸುವುದು ಹೃದಯಾಘಾತದ ಬಗ್ಗೆ ಶೀಘ್ರ ಪರಿಶೀಲನೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ನೀಡಿ ಒತ್ತಾಯಿಸಿದ್ದೇನೆಸಿಮೆಂಟ್ ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.