ADVERTISEMENT

ಅನಕೃ ಬದುಕು ಎಲ್ಲರಿಗೂ ಸ್ಫೂರ್ತಿದಾಯಕ: ಸಾಹಿತಿ ಗೀತಾ

ಕಾದಂಬರಿ ಸಾರ್ವಭೌಮನ ನೆನಪು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 4:04 IST
Last Updated 25 ಜುಲೈ 2022, 4:04 IST
ಅರಕಲಗೂಡಿನಲ್ಲಿ ಭಾನುವಾರ ನಡೆದ ಅನಕೃ ನೆನಪು ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಯು.ಗೀತಾ ಅವರಿಗೆ 2022 ನೇ ಸಾಲಿನ ಅನಕೃ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್.ಕೆ.ಪದ್ಮನಾಭ್, ಡಾ.ಮಲ್ಲೇಶ ಗೌಡ, ಅನಿಲ್ ಕುಮಾರ್ ಇದ್ದರು.
ಅರಕಲಗೂಡಿನಲ್ಲಿ ಭಾನುವಾರ ನಡೆದ ಅನಕೃ ನೆನಪು ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಯು.ಗೀತಾ ಅವರಿಗೆ 2022 ನೇ ಸಾಲಿನ ಅನಕೃ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್.ಕೆ.ಪದ್ಮನಾಭ್, ಡಾ.ಮಲ್ಲೇಶ ಗೌಡ, ಅನಿಲ್ ಕುಮಾರ್ ಇದ್ದರು.   

ಅರಕಲಗೂಡು: ತಮ್ಮ ಬಿಡುವಿಲ್ಲದ ಸಾಹಿತ್ಯ ಕೃಷಿಯ ನಡುವೆ ನಾಡು, ನುಡಿಯ ಏಳಿಗೆಗಾಗಿ ಹೋರಾಟ ನಡೆಸಿದ ಅನಕೃ ಅವರ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಸಾಹಿತಿ ಬಿ.ಯು. ಗೀತಾ ಅಭಿಪ್ರಾಯಪಟ್ಟರು.

ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಅಭಿಮಾನಿಗಳ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಲ್ಲಿನ ಶಿಕ್ಷಕರ ಭವನದಲ್ಲಿ ಭಾನುವಾರ ನಡೆದ ಡಾ.ಅನಕೃ ಒಂದು ನೆನಪು ಕಾರ್ಯಕ್ರಮದಲ್ಲಿ 2022 ನೇ ಸಾಲಿನ ‘ಅನಕೃ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಭವಿಷ್ಯದ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕಿದ್ದರೆ ನಮ್ಮ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಕುರಿತು ಅರಿವು ಮುಖ್ಯ, ಅನಕೃ ಪ್ರಾರಂಭಿಸಿದ ಕನ್ನಡ ಕಟ್ಟುವ ಕಾರ್ಯವನ್ನು ನಾವು ಮುಂದುವರಿಸಿಕೊಂಡು ಬರಬೇಕಿದೆ. ಕನ್ನಡದ ಉಳಿವಿಗೆ ಹಿಂದಿಗಿಂತಲೂ ಇಂದು ಹೆಚ್ಚಿನ ಅಸ್ಥೆ ವಹಿಸುವುದು ಅಗತ್ಯವಿದ್ದು, ಈ ಕುರಿತು ನಮ್ಮಲ್ಲಿ ಜಾಗೃತಿ ಅಗತ್ಯ ಎಂದರು.

ADVERTISEMENT

ಬೆಂಗಳೂರಿನಲ್ಲಿ ಸಾಹಿತ್ಯ ಕೃಷಿ ನಡೆಸುತ್ತಿದ್ದ ತಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವ ಇಲ್ಲಿನ ಸಾಹಿತ್ಯ ಪ್ರಿಯರ ಪ್ರೀತಿ, ವಿಶ್ವಾಸಕ್ಕೆ ತಾವು ಋಣಿಯಾಗಿರುವುದಾಗಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎ.ಟಿ.ರಾಮಸ್ವಾಮಿ, ನಾಡು ಕಂಡಂತಹ ಧೀಮಂತ ಸಾಹಿತಿ ಅನಕೃ ಅರಕಲಗೂಡು ಮೂಲದವರು ಎಂಬುದು ಹೆಮ್ಮೆಯ ಸಂಗತಿ. ಅವರ ಸಾಧನೆ ನಮಗೆ ಮಾದರಿ ಆಗಬೇಕು. ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಸಮಾಜ ದಿಕ್ಕು ತಪ್ಪುತ್ತಿದೆ. ಸಾಹಿತಿಗಳು ಹಾಗೂ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಈ ಕುರಿತು ಜಾಗೃತಿ ಮೂಡಿಸುವ ಮೂಲಕ ಹಳಿ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೊಡಗು ಜಿಲ್ಲೆಯ ನಿರ್ದೇಶಕಿ ಲೀಲಾವತಿ ಮಾತನಾಡಿದರು. ಸಾಹಿತಿ ಬಿ.ಯು.ಗೀತಾ ಅವರಿಗೆ ಪ್ರಶಸ್ತಿ ಪತ್ರ, ಫಲಕ ನೀಡಿ 2022 ನೇ ಸಾಲಿನ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಮತ್ತು ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ತಾಲ್ಲೂಕು ಘಟಕದ ಉಪಾಧ್ಯಕ್ಷ ಎಸ್.ಗಂಗಾಧರ್, ಗೌರವ ಕಾರ್ಯದರ್ಶಿ ಎಸ್.ಎನ್. ಶಿವಕುಮಾರ್, ಆರ್‌ಕೆಪಿ ಅಭಿಮಾನಿ ಬಳಗದ ಅಧ್ಯಕ್ಷ ರಮೇಶ್ ವಾಟಾಳ್ ಉಪಸ್ಥಿತರಿದ್ದರು.

ಅನಕೃ ಪ್ರಶಸ್ತಿ ವಿಜೇತ ಸಾಹಿತಿ ಬಿ.ಯು. ಗೀತಾ ಅವರನ್ನು ಗಣಪತಿ ಕೊತ್ತಲು ಉದ್ಯಾನದಿಂದ ಕಾರ್ಯಕ್ರಮದ ವೇದಿಕೆವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಗಾರುಡಿ ಗೊಂಬೆಗಳು, ಮಂಗಳವಾದ್ಯ, ತಮಟೆ ವಾದ್ಯ ಮುಂತಾದ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.