ಅರಸೀಕೆರೆ: ಮಕ್ಕಳ ಲಾಲನೆ- ಪಾಲನೆ ಮನೆಯ ತಾಯಿಗೆ ಬಿಟ್ಟರೆ, ಅಂಗನವಾಡಿ ಕಾರ್ಯಕರ್ತರಿಗೆ ಮಾತ್ರ ಸಿಗುತ್ತಿದೆ. ಭರವಸೆ ಇಟ್ಟು ಕಳುಹಿಸಿ ಕೊಡುವ ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತೆಯರ ಮೇಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಗರದ ವೆಂಕಟೇಶ್ವರ ಕಲಾಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ್ ಮಾಸಾಚರಣೆ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದೃಢ ಸಮಾಜ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾತ್ರ ಅಮೂಲ್ಯವಾಗಿದೆ. ಅಂಗನವಾಡಿ ಕೇಂದ್ರಗಳು ಮಕ್ಕಳ ಲಾಲನೆ ಪಾಲನೆಯಲ್ಲಿ ತನ್ನದೇ ಪಾತ್ರ ವಹಿಸುವುದರ ಮೂಲಕ ಸರ್ಕಾರದ ಯೋಜನೆಗಳು ಜನರ ಬಳಿಗೆ ತಲುಪಲು ಸೇತುವೆಯಾಗಿ ಸೇವೆ ಸಲ್ಲಿಸುತ್ತಿವೆ. ಅಂಗನವಾಡಿ ಕೇಂದ್ರಗಳ ಮೂಲಕ ಅಪೌಷ್ಟಿಕ ಆಹಾರ ಸರಬರಾಜು ವಿರೋಧಿಸಿ ಸದನದಲ್ಲಿ ಹೋರಾಟ ಮಾಡಿದ ಫಲ ಇಂದು ಸ್ಥಳಿಯ ಪೌಷ್ಟಿಕಾಂಶವುಳ್ಳ ಆಹಾರ ತಯಾರಾಗುವುದರೊಂದಿಗೆ ಪೂರೈಸಲಾಗುತ್ತಿದೆ. ಪುನಃ ಅದೇ ಅಪೌಷ್ಟಿಕತೆ ಆಹಾರ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದು, ಅಂಗನವಾಡಿ ಅಥವಾ ಸ್ತ್ರೀಶಕ್ತಿ ಸಂಘಗಳಿಗೆ ಆಹಾರ ಸರಬರಾಜು ಟೆಂಡರ್ ನೀಡಲು ಸರ್ಕಾರದ ಗಮನ ಸೆಳೆಯಲಾಗುವುದು.
ಪ್ರಭಾರ ಸಿಡಿಪಿಒ ಯೋಗೀಶ್ ಮಾತನಾಡಿದರು. ಅಂಗನವಾಡಿ ಕೇಂದ್ರಗಳ ನೂತನ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ನೀಡಲಾಗುವ ಆಹಾರಗಳನ್ನು ಪ್ರದರ್ಶಿಸಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಅಂಗನವಾಡಿ ಕೇಂದ್ರಗಳಿವೆ. ಆದರೆ ಕಟ್ಟಡಗಳ ಕೊರತೆ ಇದ್ದಾಗ ಶಾಸಕ ಶಿವಲಿಂಗೇಗೌಡರ ಪ್ರಯತ್ನದಿಂದ ನೂತನ ಕಟ್ಟಡಗಳು ನಿರ್ಮಿಸಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಸಿದ್ದೇಶ್ ಜಾಜೂರು, ಪ್ರದೀಪ್ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಂಗನಾಥ್ ಸಿ., ತಾಲ್ಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಾಗರತ್ನಮ್ಮ, ವಲಯ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಟ್ಯಾಬ್ ವಿತರಣೆ ಗರ್ಭಿಣಿಯರಿಗೆ ಸೀಮಂತ ಕಾರ್ಯದೊಂದಿಗೆ ತುಂಬಿದ ಮಡಿಲು ಮೇಲ್ದರ್ಜೆಗೆ ಏರಿಸಲಾದ ಅಂಗನವಾಡಿ ಕೇಂದ್ರಗಳಿಗೆ ಎಲ್.ಸಿ.ಡಿ ಟಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.