ADVERTISEMENT

ಹಾಸನ: ‘ಹೈನುಗಾರಿಕೆಗೆ ಇನ್ನಷ್ಟು ಶಕ್ತಿ ತುಂಬಿ’

ತರಬೇತಿ ಕೇಂದ್ರ ಉದ್ಘಾಟನೆ; ಇಲಾಖೆ ಅಧಿಕಾರಿಗಳಿಗೆ ಶಾಸಕ ಪ್ರೀತಂ ಜೆ.ಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 13:30 IST
Last Updated 30 ಜನವರಿ 2022, 13:30 IST
ಹಾಸನದ ಸಂತೆಪೇಟೆ ಬಳಿ ನಿರ್ಮಿಸಿರುವ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕೇಂದ್ರದ ಕಟ್ಟಡಗಳನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು. ಜಿ.ಪಂ ಸಿಇಒ ಕಾಂತರಾಜ್‌, ಎಸಿ ಬಿ.ಎ ಜಗದೀಶ್‌, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಕೆ.ಆರ್ ರಮೇಶ್, ಪಶು ವೈದ್ಯಕೀಯ ತರಬೇತಿ ಸಂಸ್ಥೆ ಉಪನಿರ್ದೇಶಕ ನಾಗರಾಜ್ ಇದ್ದಾರೆ
ಹಾಸನದ ಸಂತೆಪೇಟೆ ಬಳಿ ನಿರ್ಮಿಸಿರುವ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕೇಂದ್ರದ ಕಟ್ಟಡಗಳನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು. ಜಿ.ಪಂ ಸಿಇಒ ಕಾಂತರಾಜ್‌, ಎಸಿ ಬಿ.ಎ ಜಗದೀಶ್‌, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಕೆ.ಆರ್ ರಮೇಶ್, ಪಶು ವೈದ್ಯಕೀಯ ತರಬೇತಿ ಸಂಸ್ಥೆ ಉಪನಿರ್ದೇಶಕ ನಾಗರಾಜ್ ಇದ್ದಾರೆ   

ಹಾಸನ: ರೈತರು ಬೇಸಾಯದ ಜತೆಗೆ ಹೈನುಗಾರಿಕೆ ಮೇಲೂ ಹೆಚ್ಚು ಅವಲಂಬಿತರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಮಾಡಬೇಕಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದ ಸಂತೆಪೇಟೆ ಬಳಿ ನೂತನವಾಗಿ ನಿರ್ಮಿಸಿರುವ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕೇಂದ್ರದ ಕಟ್ಟಡಗಳನ್ನು ಭಾನುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಸಣ್ಣ ಮತ್ತು ಮಧ್ಯಮ ರೈತರಿಗೆ ಹೈನುಗಾರಿಕೆ ಪ್ರಧಾನ ಉಪ ಕಸುಬು ಅದರ ಆದಾಯ ಮೂಲವಾಗಿದೆ, ಜತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪಶುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜತೆಗೆ ತಮ್ಮ ಶ್ರಮವನ್ನು ಲಾಭದಾಯಕ ವಾಗಿಸಿಕೊಳ್ಳುವ ಬಗ್ಗೆ ಸೂಕ್ತ ತರಬೇತಿ ಒದಗಿಸಿ’ ಎಂದು ಸಲಹೆ ನೀಡಿದರು.

ADVERTISEMENT

‘ಕಟ್ಟಡಗಳ ಉಳಿಕೆ ಕಾಮಗಾರಿ ಹಾಗೂ‌ ಮೂಲ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮೂಲಕ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್ ಮಾತನಾಡಿ, ‘ಜಿಲ್ಲೆಯಲ್ಲಿ ಅಂದಾಜು 5.50 ಲಕ್ಷ ರಾಸುಗಳಿದ್ದು, ನಿತ್ಯ 10 ಲಕ್ಷ ಲೀಟರ್‌ ಹಾಲು ಉತ್ಪಾ ದನೆ ಆಗುತ್ತಿದೆ. ಇಲಾಖೆಯಿಂದ ರೈತ ಸಂಜೀವಿನಿ ಜಾನುವಾರು ವಿಮಾ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರಾಸುಗಳ ಅನಿರೀಕ್ಷಿತ ಸಾವಿ ನಿಂದ ಕೃಷಿಕರು ಆರ್ಥಿಕ ನಷ್ಟ ಎದುರಿ ಸುವ ಸಾಮರ್ಥ್ಯ ತುಂಬಿ’ ಎಂದರು.

‘ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಸಾಕಷ್ಟು ವೀರರು ತ್ಯಾಗ ಬಲಿದಾನ ಗೈದಿದ್ದಾರೆ. ಎಲ್ಲರ ನೆನಪಿಗಾಗಿ ಹುತಾತ್ಮರ ದಿನವಾಗಿ‌ ಆಚರಿಸಲಾಗಿದೆ. ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯ ಅರ್ಥಪೂರ್ಣವಾಗಿ ಉಳಿಸಿಕೊಳ್ಳೋಣ’ ಎಂದು ಹೇಳಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಕೆ.ಆರ್ ರಮೇಶ್ ಮಾತನಾಡಿ, ‘ರಾಜ್ಯ ಸರ್ಕಾರದ 2015–16 ನೇ ಸಾಲಿನಲ್ಲಿ ನಾಗರಿಕ ಕಾಮಗಾರಿ ಯೋಜನೆ ಅಡಿ ₹ 1.29 ಕೋಟಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಮೈಸೂರು ವಿಭಾಗದ ತರಬೇತಿ ಕೇಂದ್ರ ಹಾಸನದಲ್ಲಿ ಆರಂಭವಾಗುತ್ತಿದೆ. ಈ ಕಟ್ಟಡ 2009–10ನೇ ಸಾಲಿನಲ್ಲಿ ಒಂದು ಅಂತಸ್ತು ಈಗಾಗಲೇ ಇತ್ತು, ₹ 2 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ ಎರಡು ಅಂತಸ್ತನ್ನು ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಆರ್‌. ಮೋಹನ್, ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ. ಕೃಷ್ಣೇಗೌಡ, ಪಶು ವೈದ್ಯಕೀಯ ತರಬೇತಿ ಸಂಸ್ಥೆ ಉಪನಿರ್ದೇಶಕ ನಾಗರಾಜ್, ಕೆ.ಅರ್.ಐ.ಡಿ.ಎಲ್ ಸಂಸ್ಥೆಯ ಕಾರ್ಯಪಾಲಕ ಎಂಜಿನಿಯರ್ ಮಹದೇವ್ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.