ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಸಮೀಪದ ದೊಡ್ಡತಪ್ಪಲೆ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಮಣ್ಣು ಕುಸಿದು 3 ಗಂಟೆ ಸಂಚಾರ ಸ್ಥಗಿತವಾಗಿತ್ತು.
ಗುಡ್ಡ ಕುಸಿತದಿಂದ ಯಾರಿಗೂ ತೊಂದರೆ ಆಗಿಲ್ಲ. ಆದರೆ, ಮಣ್ಣು ಹಾಗೂ ಮರಗಳು ಹೆದ್ದಾರಿಯ ಮೇಲೆ ಅಡ್ಡಲಾಗಿ ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾವಿರಾರು ಮಂದಿ ಪ್ರಯಾಣಿಕರು ಗಂಟೆಗಟ್ಟಲೆ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಂಡು ಕಾಯಬೇಕಾಯಿತು.
ಪೊಲೀಸರು ಸ್ಥಳಕ್ಕೆ ಬಂದು, ಚತುಷ್ಪಥ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಕಂಪನಿಯ ಯಂತ್ರಗಳನ್ನು ತರಿಸಿ, ಮಣ್ಣು ಹಾಗೂ ಮರಗಳನ್ನು ತೆರವು ಮಾಡಿದರು. ಬೆಳಿಗ್ಗೆ 4.50ರ ಸುಮಾರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
‘ಹೆದ್ದಾರಿಯ ಎರಡು ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳ ಮೇಲೆ ಎಲ್ಲಿ ಗುಡ್ಡ ಕುಸಿಯುತ್ತದೆಯೋ ಎಂಬ ಭೀತಿಯಲ್ಲಿಯೇ ಚಾಲಕರು ಹಾಗೂ ಪ್ರಯಾಣಿಕರು ಪರದಾಡುತ್ತಿದ್ದರು’ ಎಂದು ಸ್ಥಳಕ್ಕೆ ಧಾವಿಸಿದ್ದ ಸ್ಥಳೀಯ ಅಂಬುಲೆನ್ಸ್ ಚಾಲಕ ಖಾದರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.