ADVERTISEMENT

35 ವರ್ಷಗಳ ನಂತರ ಶುರುವಾದ ಸಂತೆ

ತೆಂಗಿನಕಾಯಿಯ ಜೊತೆಗೆ ತರಕಾರಿ, ಧಾನ್ಯಗಳ ಮಾರಾಟಕ್ಕೂ ಅವಕಾಶ: ರೈತರ ಸಂತಸ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:46 IST
Last Updated 25 ನವೆಂಬರ್ 2025, 2:46 IST
ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕಳೆದ ಭಾನುವಾರದಿಂದ ಸಂತೆ ಪ್ರಾರಂಭವಾಗಿದ್ದು, ಎರಡನೇ ವಾರ ಹೆಚ್ಚಿನ ವ್ಯಾಪಾರ ನಡೆಯಿತು
ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕಳೆದ ಭಾನುವಾರದಿಂದ ಸಂತೆ ಪ್ರಾರಂಭವಾಗಿದ್ದು, ಎರಡನೇ ವಾರ ಹೆಚ್ಚಿನ ವ್ಯಾಪಾರ ನಡೆಯಿತು   

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 35 ವರ್ಷಗಳ ನಂತರ ಪ್ರತಿ ಭಾನುವಾರ ಸಂತೆ ಪ್ರಾರಂಭಗೊಂಡಿದ್ದು, 2ನೇ ವಾರವು ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು.

ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಕಳೆದ ಭಾನುವಾರ ಶಾಸಕ ಸಿ.ಎನ್. ಬಾಲಕೃಷ್ಣ ನೂತನ ತೆಂಗಿನಕಾಯಿ ಸಂತೆಗೆ ಚಾಲನೆ ನೀಡಿದ್ದರು. ಕಳೆದ ವಾರ ಸುಮಾರು 200 ಟನ್‌ಗೂ ಹೆಚ್ಚು ಕಾಯಿ ವ್ಯಾಪಾರ ವಹಿವಾಟು ನಡೆದಿತ್ತು.

ಕಾಯಿ ವ್ಯಾಪಾರಿಗಳು ಸೇರಿದಂತೆ ಈ ಭಾಗದ ರೈತರ ಒತ್ತಾಸೆಯಂತೆ ಶಾಸಕರ ಮೇಲೆ ಹೆಚ್ಚಿನ ಒತ್ತಡ ತರುವ ಮೂಲಕ ಪ್ರತಿ ಭಾನುವಾರ ಸಂತೆ ಪ್ರಾರಂಭಗೊಂಡಿದೆ. ಎಪಿಎಂಸಿ ಉಪ ಮಾರುಕಟ್ಟೆ ಅಭಿವೃದ್ಧಿಗೆ ಶಾಸಕರು ಈಗಾಗಲೇ ₹ 1.50 ಕೋಟಿ ಅನುದಾನ ನೀಡಿದ್ದಾರೆ. ವಾಣಿಜ್ಯ ಮಳಿಗೆ, ಹೈಟೆಕ್ ಶೌಚಾಲಯ, ವಿದ್ಯುತ್ ದೀಪ, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಎಪಿಎಂಸಿ ಉಪ ಮಾರುಕಟ್ಟೆ ಅಭಿವೃದ್ಧಿಯಿಂದ ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸಂತೆ ನಡೆಯುವ ಮೂಲಕ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಬಸವನಪುರ ಬೆಳ್ಳೇಕಾರ್ ಪ್ರಕಾಶ್ ತಿಳಿಸಿದರು.

ADVERTISEMENT

ಪ್ರತಿ ಭಾನುವಾರ ನಡೆಯುವ ಕಾಯಿ ಸಂತೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ತರುವ ಸುಲಿದ ತೆಂಗಿನಕಾಯಿ ಸುಮಾರು 250 ರಿಂದ 300 ಟನ್‌ವರೆಗೆ ವಹಿವಾಟು ಆಗಲಿದೆ. ಇದರಿಂದ ಪ್ರತಿವಾರ ₹1.50 ಕೋಟಿ ವಹಿವಾಟಿನ ಜೊತೆಗೆ ತರಕಾರಿ ಸೇರಿದಂತೆ ವಿವಿಧ ವಹಿವಾಟುಗಳೂ ನಡೆಯುತ್ತವೆ. ಹೋಬಳಿ ಕೇಂದ್ರದ ಆರ್ಥಿಕ ಬಲವರ್ಧನೆ ದೃಷ್ಟಿಯಿಂದ ಹೊಸ ಸಂತೆ ಆರಂಭದಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ ಎಂಬುದು ಜನರ ವಿಶ್ವಾಸವಾಗಿದೆ.

ಭಾನುವಾರ ಸಂತೆಯಿಂದ ಬಾಗೂರು, ಹಿರೀಸಾವೆ, ನುಗ್ಗೇಹಳ್ಳಿ ಹೋಬಳಿ ರೈತರಿಗೆ ಅನುಕೂಲ. ರೈತರು ತರುವ ತೆಂಗಿನ ಕಾಯಿಗೂ ಪ್ರತಿ ಕೆ.ಜಿ.ಗೆ ₹ 67 ರಿಂದ ₹ 68 ರವರೆಗೆ ಬೆಲೆ ಸಿಗುತ್ತದೆ. ಸಂತೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತ ದಿನೇಶ್ ಬಾಬು ಮನವಿ.

ನುಗ್ಗೇಹಳ್ಳಿಯಲ್ಲಿ ಭಾನುವಾರ ನಡೆದ ಸಂತೆಯಲ್ಲಿ ತೆಂಗಿನಕಾಯಿ ವ್ಯಾಪಾರ ಭರ್ಜರಿಯಾಗಿ ನಡೆಯಿತು
ಸಿ.ಎನ್‌. ಬಾಲಕೃಷ್ಣ
ಪ್ರತಿ ಭಾನುವಾರ ತೆಂಗಿನಕಾಯಿ ತರಕಾರಿ ವಿವಿಧ ಧಾನ್ಯಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ದನ ಕುರಿ ಎಮ್ಮೆ ವ್ಯಾಪಾರ ಪ್ರಾರಂಭಿಸಲಾಗುವುದು. ತಾಲ್ಲೂಕು ಎಪಿಎಂಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು
ಸಿ.ಎನ್.ಬಾಲಕೃಷ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.