ADVERTISEMENT

ಫಲಿತಾಂಶ ಉತ್ತಮಗೊಳಿಸಲು ರಸಪ್ರಶ್ನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 3:13 IST
Last Updated 26 ನವೆಂಬರ್ 2025, 3:13 IST
ಅರಕಲಗೂಡಿನಲ್ಲಿ ಸೋಮವಾರ ಏರ್ಪಡಿಸಿದ್ದ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಉದ್ಘಾಟಿಸಿದರು
ಅರಕಲಗೂಡಿನಲ್ಲಿ ಸೋಮವಾರ ಏರ್ಪಡಿಸಿದ್ದ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಉದ್ಘಾಟಿಸಿದರು   

ಅರಕಲಗೂಡು: ವಿದ್ಯಾರ್ಥಿಗಳು ಪರೀಕ್ಷಾ ಭಯ ತೊರೆದು ಧೈರ್ಯದಿಂದ ಪರೀಕ್ಷೆ ಎದುರಿಸಬೇಕು ಎಂದು ಸಂಗೀತ ವಿದ್ವಾಂಸ ಆರ್. ಕೆ. ಪದ್ಮನಾಭ್ ಕಿವಿಮಾತು ಹೇಳಿದರು.

ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಾಧನೆಯ ಮೂಲಕ ಗುರು ದಕ್ಷಿಣೆ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಮಟ್ಟದಲ್ಲಿ ಮೂರನೇ‌ ಸ್ಥಾನದಲ್ಲಿರುವ ತಾಲ್ಲೂಕು ಮೊದಲ ಸ್ಥಾನಕ್ಕೆ ಏರುವಂತಾಗಬೇಕು. ವಿದ್ಯಾರ್ಥಿಗಳು ಪರೀಕ್ಷೆ ಭಯ ಬಿಟ್ಟು, ಓದಿನ ಕಡೆ ಗಮನ ಹರಿಸಬೇಕು ಎಂದರು.

10ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸುವ ಸರ್ಕಾರಿ ಶಾಲೆ ವಿದ್ಯಾರ್ಥಿಗೆ ಪ್ರತಿ ವರ್ಷ ₹ 15,000 ಬಹುಮಾನ ನೀಡುವುದಾಗಿ ಘೋಷಿಸಿದರು.

ತಹಶೀಲ್ದಾರ್ ಕೆ.ಸಿ. ಸೌಮ್ಯಾ, ‘ಒತ್ತಡಗಳಿಗೆ ಒಳಗಾಗದೆ ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಗಮನ ಹರಿಸಬೇಕು. ಅಂಕ ಗಳಿಕೆಗೆ ಸೀಮಿತರಾಗದೆ ಮೌಲ್ಯಗಳನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಇಒ ಕೆ.ಪಿ. ನಾರಾಯಣ್, ‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸಲು ಇಲಾಖೆ ಹಲವು ಕ್ರಮ ಕೈಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ತಾಲ್ಲೂಕು ಮೊದಲ ಸ್ಥಾನದ ಪಡೆಯುವ ಗುರಿ ಹೊಂದಿದ್ದು, ತಾಲ್ಲೂಕಿನ 58 ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದಿರುವ 300 ವಿದ್ಯಾರ್ಥಿಗಳನ್ನು ಗುರುತಿಸಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಧುಕರ್, ಕಾರ್ಯದರ್ಶಿ ಬೋರಣ್ಣಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿವೇಕಾನಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.