ADVERTISEMENT

ಅರಕೆರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಮನೆ ಗೋಡೆಗಳು ಬಿರುಕು

ಜಮೀನಿಗೆ ಬೀಳುತ್ತಿರುವ ಕಲ್ಲಿನ ಚೂರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 14:48 IST
Last Updated 8 ಜನವರಿ 2019, 14:48 IST
ಅರಸೀಕೆರೆ ತಾಲ್ಲೂಕಿನ ಅರಕೆರೆ ಹಾಗೂ ಬೈರಾಪುರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅರಸೀಕೆರೆ ತಾಲ್ಲೂಕಿನ ಅರಕೆರೆ ಹಾಗೂ ಬೈರಾಪುರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.   

ಹಾಸನ : ಅರಸೀಕೆರೆ ತಾಲ್ಲೂಕಿನ ಅರಕೆರೆ ಗ್ರಾಮದ ಸರ್ವೆ ನಂ. 180 ಮತ್ತು ಬೈರಾಪುರ ಗ್ರಾಮದ ಸರ್ವೆ ನಂ. 121ನೇ ಕ್ವಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಅರಕೆರೆ ಗ್ರಾಮದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಕಾಚೀಘಟ್ಟ ಗ್ರಾಮದ ಕೆಂಚೇನಹಳ್ಳಿಯ ಹೊಸೂರು ಹಳ್ಳಿ ಜನರಿಗೂ ತೊಂದರೆಯಾಗುತ್ತಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಜಮೀನುಗಳಿಗೆ ಧೂಳು ಮತ್ತು ಕಲ್ಲುಗಳು ಬೀಳುತ್ತಿವೆ. ಗಣಿಗಾರಿಕೆ ಮತ್ತು ಮರಳು ದಂಧೆಯಿಂದ ಅಂರ್ತಜಲ ಮಟ್ಟ ಕುಸಿದು ಕುಡಿಯಲು ಮತ್ತು ಕೃಷಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಬರುತ್ತಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಸುತ್ತಮುತ್ತಲ ಗ್ರಾಮದೊಳಗೆ ಕಲ್ಲಿನ ಚೂರುಗಳು ಬೀಳುತ್ತಿವೆ. ಅಕ್ರಮ ಗಣಿಗಾರಿಕೆಗೆ ಜಾವಗಲ್, ಬಾಣಾವರ ಹಾಗೂ ಹಳೇಬೀಡು ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ. ಗಣಿಗಾರಿಕೆ ಮಾಡುತ್ತಿರುವ ಬಿ.ಪಿ.ಸುರೇಶ್, ಜ್ಞಾನಮೂರ್ತಿ, ಕಾಳಿಯಪ್ಪ, ರವಿ, ನಸ್ರುಲ್ಲ, ವಿಶ್ವನಾಥ್, ಸಿದ್ದೇಶ್ ಅವರು ರೌಡಿ ಶೀಟರ್‌ಗಳು. 2013–14ರಲ್ಲೂ ಅಂದಿನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ಆಗ ಎರಡು ತಿಂಗಳು ನಿಲ್ಲಿಸಲಾಗಿತ್ತು. ಈಗ ಬೃಹತ್‌ ಮಟ್ಟದಲ್ಲಿ ನಡೆಯುತ್ತಿದೆ’ ಎಂದು ದೂರಿದರು.

ADVERTISEMENT

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್‌ಪಿ ಪ್ರಕಾಶ್‌ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.