ADVERTISEMENT

ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:40 IST
Last Updated 21 ಜನವರಿ 2026, 5:40 IST
ಅರಸೀಕೆರೆ ತಾಲ್ಲೂಕಿನ ಬಾಣಾವಾರ ಹೋಬಳಿಯ ಪುರ್ಲೆಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು
ಅರಸೀಕೆರೆ ತಾಲ್ಲೂಕಿನ ಬಾಣಾವಾರ ಹೋಬಳಿಯ ಪುರ್ಲೆಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು   

ಅರಸೀಕೆರೆ: ‘18 ವರ್ಷಗಳಿಂದ ಸತತವಾಗಿ ಜನರ ಸೇವೆಗಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ನನಗೆ ಕ್ಷೇತ್ರದ ಅಭಿವೃದ್ಧಿಯೇ ಗುರಿ. ಒಣ ಭಾಷಣ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ತಾಲ್ಲೂಕಿನ ಬಾಣಾವಾರ ಹೋಬಳಿಯ ಪುರ್ಲೆಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

80 ವರ್ಷಗಳಿಂದ ಆಗದೇ ಇರುವ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿರುವ ಆತ್ಮತೃಪ್ತಿ ಇದೆ. ಅರಸೀಕೆರೆ ವ್ಯಾಪ್ತಿಯಲ್ಲಿ ಸಂಪೂರ್ಣ ಕಾಂಕ್ರಿಟೀಕರಣ, ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ, ಪ್ರತಿ ಸಮಾಜಕ್ಕೂ ಒಂದೊಂದು ಸಮುದಾಯ ಭವನ ನಿರ್ಮಾಣ ಸೇರಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವಲ್ಲಿ ಶ್ರಮಿಸುತ್ತಿದ್ದು, ಟೀಕೆ, ಟಿಪ್ಪಣಿಗಳಿಗೆ ಎದೆಗುಂದದೇ ಜನರ ಸೇವೆಗೆ ಮತ್ತಷ್ಟು ಯೋಜನೆಗಳನ್ನು ಒದಗಿಸುತ್ತೇನೆ ಎಂದರು.

ADVERTISEMENT

ಇತಿಹಾಸದಲ್ಲಿ ಅರಸೀಕೆರೆಯ ಕೆರೆಗೆ ನೀರು ಹರಿಯುವುದಿಲ್ಲ ಎಂದು ಮಹಾನಾಯಕರು ಭಾಷಣ ಮಾಡಿದ್ದರು. ಆದರೆ ಹೋರಾಟ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಕಣ್ಣೀರು ಹಾಕಿ ನೀರು ತಂದಿದ್ದೇನೆ. ಸತ್ಯಾಸತ್ಯತೆ ಜನರಿಗೆ ಗೊತ್ತಿದೆ. ಕಣಕಟ್ಟೆ ಹೋಬಳಿಯ 8 ಕೆರೆಗಳಿಗೆ ನೀರು ತುಂಬಿಸಿದ್ದು, ಬಾಗಿನ ಅರ್ಪಿಸಿದ್ದೇವೆ. ಬಾಣಾವಾರ ಹೋಬಳಿಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲಾಗುವುದು. ಪುರ್ಲೇಹಳ್ಳಿ ಕೆರೆಗೂ ನೀರು ತುಂಬಿಸಲಾಗುವುದು ಎಂದರು.

ದುಡಿಯೋ ಎತ್ತಿಗೆ ಹುಲ್ಲು ಹಾಕಬೇಕು. ಅದು ಬಿಟ್ಟು ಸುಮ್ಮನೆ ಕೂತು ಎದ್ದು ಹೋಗೋ ಎತ್ತಿಗೆ ಹುಲ್ಲು ಹಾಕಬಾರದು. ನಿಮ್ಮ ಕೆಲಸ ಮಾಡುವಂಥವರ ಜೊತೆ ಇರಬೇಕು. ಅದು ಬಿಟ್ಟು ವೃತ್ತಗಳಲ್ಲಿ ಪುಗಸಟ್ಟೆ ಭಾಷಣ ಮಾಡವವರ ಜೊತೆ ಇದ್ದು ಪ್ರಯೋಜನವಿಲ್ಲ. ಅರಸೀಕೆರೆ ಜನತೆ ಜಾಗೃತರಾಗಿದ್ದಾರೆ. ಬುರುಡೆ ಮಾತುಗಳನ್ನು ನಂಬುವುದಿಲ್ಲ ಎಂದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಿದೆ. ಗ್ಯಾರಂಟಿಗಳಿಂದ ಪ್ರತಿ ಕುಟುಂಬಗಳಿಗೆ ಪ್ರತಿ ತಿಂಗಳು ₹5 ಸಾವಿರ ನೀಡುತ್ತಿದೆ. ಆದರೆ ವಿರೋಧ ಪಕ್ಷದವರು ಹೊಟ್ಟೆಯುರಿಯಿಂದ ಈ ಗ್ಯಾರಂಟಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಡವರ ಪರ ಇದೆ ಎಂದು ತಿಳಿಸಿದರು.

ನಂತರ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆ ಗ್ರಾಮದ ಶಾಲಾ ಆವರಣದಲ್ಲಿ ನಡೆಯಿತು. ಕಂದಾಯ, ಸಣ್ಣ ನೀರಾವರಿ ಸೇರಿ ಇಲಾಖೆಗಳಿಂದ ಬಾಕಿ ಉಳಿದಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಸುಮಾರು 70 ಅರ್ಜಿಗಳು ಸಲ್ಲಿಕೆಯಾಗಿದ್ದು, 40-50 ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮಾತನಾಡಿ, ಗ್ರಾಮ ಸಭೆಗಳಿಂದ ಜನರಿಗೆ ಉಪಯೋಗವಾಗುತ್ತಿವೆ. 36 ಪಂಚಾಯಿತಿಗಳ ವ್ಯಾಪ್ತಿಯ ಮೂಲ ಸೌಕರ್ಯ, ಸರ್ಕಾರದಿಂದ ಆಗಬೇಕಾದ ಕೆಲಸಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಸಮಕ್ಷಮದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿನೂತನ ಕಾರ್ಯಕ್ರಮವಾಗಿದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗಂಗಣ್ಣ , ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಮುಖಂಡರು, ಸಾರ್ವಜನಿಕರು, ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.