ಅರಸೀಕೆರೆ: ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಉಡುಸಲಮ್ಮ ದೇವಿ ಹಾಗೂ ಚೌಡೇಶ್ವರಿ ದೇವಿಯವರ ಮಹಾರಥೋತ್ಸವ ಹಾಗೂ ಸಿಡಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಡಗರದಿಂದ ನೆರವೇರಿತು.
ಆ.11ರಿಂದ 17ರವರೆಗೆ ಗ್ರಾಮದಲ್ಲಿ ದೇವರ ಮೂರ್ತಿಗಳ ವಿಶೇಷ ಮೆರವಣಿಗೆ ಸೇರಿದಂತೆ ನಾನಾ ರೀತಿಯ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸ್ವರ್ಣರಂಜಿತ ಆಭರಣಗಳು ದೇವರ ಮೂರ್ತಿಗಳ ಮೇಲೆ ರಾರಾಜಿಸುತ್ತಿದ್ದು, ಆಕರ್ಷಕವಾಗಿ ಕಾಣುತ್ತಿತ್ತು.
ಭಾನುವಾರ ಮೊದಲಿಗೆ ಸಿಡಿ ಮಹೋತ್ಸವದ ಕಂಬಕ್ಕೆ ಚೌಡೇಶ್ವರಿ ದೇವಿಯವರು ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಹರಕೆ ಹೊತ್ತ ನೂರಾರು ಮಂದಿ ಸಿಡಿಯೊಳಗೆ ಮಕ್ಕಳನ್ನು ಆಡಿಸಿ ಸಂತಸಪಟ್ಟರು. ಮಧ್ಯಾಹ್ಮ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ನಂತರ ಅಲಂಕೃತ ರಥದಲ್ಲಿ ಉಡುಸಲಮ್ಮ ದೇವಿಯರನ್ನು ಪ್ರತಿಷ್ಠಾಪಿಸಲಾಯಿತು.
ರಥಕ್ಕೆ ಚೌಡೇಶ್ವರಿ ದೇವಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥ ಮುಂದಕ್ಕೆ ಸಾಗುತ್ತಿದ್ದಂತೆ ಜೈಕಾರ ಕೂಗಿ ಬಾಳೆಹಣ್ಣು ರಥದ ಕಳಸಕ್ಕೆ ಎಸೆದು ಸಡಗರದಿಂದ ರಥವನ್ನು ಎಳೆದರು. ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ಶೇಖರ್ ಆಸ್ಪತ್ರೆ ಹಾಗೂ ತಿಪಟೂರಿನ ಶೇಖರ್ ರಕ್ತನಿಧಿ ಕೇಂದ್ರದಿಂದ ಆರೋಗ್ಯ ಉಚಿತ ತಪಾಸಣಾ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾಮಸಮುದ್ರ ಸೇರಿದಂತೆ ಮಲ್ಲೇನಹಳ್ಳಿ, ಪಡುವನಹಳ್ಳಿ, ಬೋವಿಕಾಲೊನಿ , ಯಾದವರಹಟ್ಟಿ, ಕಸುವನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.