
ಅರಸೀಕೆರೆ: ಇಲ್ಲಿನ ನಗರಸಭೆಯ 31 ವಾರ್ಡ್‌ಗಳ ಮೀಸಲಾತಿ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ನಡುವೆ ರಾಜಕೀಯ ಚದುರಂಗದಾಟಕ್ಕೆ ನಗರದಲ್ಲಿ ಸದ್ದಿಲ್ಲದೇ ಸಿದ್ಧತೆಗಳು ಶುರುವಾಗಿವೆ.
ಅಭಿವೃದ್ಧಿ ಕೆಲಸ ಕಾರ್ಯಗಳಿಗಿಂತ ವಾದ– ವಿವಾದ, ಆರೋಪ– ಪ್ರತ್ಯಾರೋಪ, ಟೀಕೆ– ಟಿಪ್ಪಣಿಗಳಿಂದ ಚರ್ಚೆಯಾಗಿದ್ದ ನಗರಸಭೆ ಆಡಳಿತ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೆ ಅರಸೀಕೆರೆಯ ನಗರಸಭೆ ಹೆಸರು ಮಾಡಿತ್ತು.
ಈ ಎಲ್ಲ ಘಟನೆ ನಡೆದರೂ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ, ಹಾಲಿ, ಹಿರಿಯರು, ಕಿರಿಯ ಮುಖಂಡರು ಸಿದ್ಧತೆ ಆರಂಭಿಸಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕೆಲವರಿಗೆ ಈಗಾಗಲೇ ಪ್ರಕಟಗೊಂಡಿರುವ ಮೀಸಲಾತಿಯಲ್ಲಿ ನಿರಾಸೆಯಾಗಿದೆ. ಆದರೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುವುದರಿಂದ ಮೀಸಲಾತಿ ತಿದ್ದುಪಡಿ ಮಾಡಿಸಿ, ತಮಗೆ ಅವಕಾಶ ಕಲ್ಪಿಸುವಂತೆ ಪಕ್ಷದ ನಾಯಕರಿಗೆ ದುಂಬಾಲು ಬೀಳುವಂತಾಗಿದೆ.
ಆಕಾಂಕ್ಷಿಗಳ ಒಂದು ಕಥೆಯಾದರೆ, ಮತ್ತೊಂದೆಡೆ ಅವರನ್ನು ಸಂತೈಸಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿ ಕೊಡುವುದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ. ಮತ್ತೊಂದೆಡೆ ಯಾವುದೇ ಪಕ್ಷದ ಬಿ. ಫಾರಂ ಪಡೆಯದೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸದೊಂದಿಗೆ ಕೆಲವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಬದಲಾದ ರಾಜಕೀಯದಲ್ಲಿ ಸದ್ಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಹಾಗಾಗಿ ಅವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಇಡಲಿದ್ದು, ಇನ್ನೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಒಗ್ಗೂಡಿ ಚುನಾವಣೆ ಎದುರಿಸಲು ಸಿದ್ಧತೆ ಆರಂಭಿಸಿವೆ.
ಕ್ಷೇತ್ರ ರಾಜಕಾರಣದ ಆಳ ಮತ್ತು ಅಗಲ ಸಂಪೂರ್ಣ ಅರ್ಥೈಸಿಕೊಂಡಿದ್ದೇನೆ. ಪ್ರತಿಪಕ್ಷಗಳ ತಂತ್ರ– ಪ್ರತಿತಂತ್ರ ಭೇದಿಸಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ.– ಎನ್.ಆರ್. ಸಂತೋಷ್, ಜೆಡಿಎಸ್ ಮುಖಂಡ
ನಗರದ ಮತದಾರರು ಪ್ರಜ್ಞಾವಂತರಿದ್ದು ಅಭಿವೃದ್ಧಿಪರ ಮತ ಚಲಾಯಿಸಲಿದ್ದಾರೆ. ಕಳೆದ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಆಗಲಿದೆ.– ಎಂ. ಸಮಿವುಲ್ಲಾ, ನಗರಸಭೆ ನಿಕಟಪೂರ್ವ ಅಧ್ಯಕ್ಷ
ಹೈಕೋರ್ಟ್‌ನತ್ತ ಚಿತ್ತ
ನಗರಸಭೆಯ ಅಧಿಕಾರ ಅವಧಿಯನ್ನು 2026ರ ಏಪ್ರಿಲ್‌ವರೆಗೂ ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರಸೀಕೆರೆ ನಗರಸಭೆ ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2021-22ರಲ್ಲಿ ನಡೆದ ನಗರಸಭೆ ಚುನಾವಣೆ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ನಿಗದಿ ಮಾಡಲು ರಾಜ್ಯ ಸರ್ಕಾರ 6 ತಿಂಗಳು ವಿಳಂಬ ಮಾಡಿತು. ಹಾಗಾಗಿ ಸದ್ಯದ ಅವಧಿಯನ್ನು ವಿಸ್ತರಿಸುವಂತೆ ಸ್ಥಳೀಯ ನಗರಸಭೆ ಸಂಸ್ಥೆ ಪ್ರತಿನಿಧಿಗಳು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸೋಮವಾರ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಂದಿನ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.
‘ನಮ್ಮ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಎಂ. ಸಮೀವುಲ್ಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.