ADVERTISEMENT

ಅರಸೀಕೆರೆ | ಉಂಡೆ ಕೊಬ್ಬರಿ: ₹18 ಸಾವಿರದತ್ತ ಬೆಲೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 7:16 IST
Last Updated 2 ಏಪ್ರಿಲ್ 2025, 7:16 IST
ಉಂಡೆ ಕೊಬ್ಬರಿ
ಉಂಡೆ ಕೊಬ್ಬರಿ   

ಅರಸೀಕೆರೆ: ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ಧಾರಣೆಯಲ್ಲಿ ಏರುಗತಿಯಲ್ಲಿ ಸಾಗಿದ್ದು, ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಕಳೆದ ವಾರದಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹18,800 ದರ ಸಿಕ್ಕಿದ್ದು, ಏಪ್ರಿಲ್‌ 1 ರಂದು ಕ್ವಿಂಟಲ್‌ಗೆ ₹17,500ಕ್ಕೆ ಮಾರಾಟವಾಗಿದೆ.

ಹಲವು ತಿಂಗಳಿನಿಂದ ಬೆಂಬಲಬೆಲೆಯೊಂದಿಗೆ ₹13 ಸಾವಿರದಿಂದ ₹14 ಸಾವಿರದವರೆಗೆ ವಹಿವಾಟು ನಡೆಸುತ್ತಿದ್ದ ಒಣ ಕೊಬ್ಬರಿ ಬೆಲೆ, ಏರಿಕೆಯ ಹಾದಿ ಹಿಡಿದಿದೆ. ಅವಕ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸತತ ಬರ ಹಾಗೂ ಇಳುವರಿ ಕುಸಿತದ ನಡುವೆ ರೈತರು ಕಷ್ಟಪಟ್ಟು ತೆಂಗು ಉಳಿಸಿಕೊಂಡಿದ್ದರು. ಆದರೂ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಧಾರಣೆ ಕುಸಿದಿದ್ದರಿಂದ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಿತ್ತು. ಖರೀದಿಗೆ ಹಲವು ಮಾನದಂಡಗಳನ್ನು ವಿಧಿಸಿದ್ದರಿಂದ ಬಹುಪಾಲು ರೈತರಿಗೆ ಪ್ರಯೋಜನ ಸಿಕ್ಕಿರಲಿಲ್ಲ.

ADVERTISEMENT

2023ರ ಮಾರ್ಚ್‌ನಲ್ಲಿ ₹9,625, 2024ರ ಮಾರ್ಚ್‌ನಲ್ಲಿ ₹8,770 ಇದ್ದ ಕೊಬ್ಬರಿ ಬೆಲೆ ಈ ವರ್ಷದ ಮಾರ್ಚ್‌ನಲ್ಲಿ ₹ 19 ಸಾವಿರಕ್ಕೆ ಏರಿದೆ. ಆದರೆ, ಇಳುವರಿ ಕುಸಿತ, ನಾಫೆಡ್ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿರುವ ರೈತರಲ್ಲಿ ಹೆಚ್ಚಿನ ದಾಸ್ತಾನು ಇಲ್ಲ. ಹಾಗಾಗಿ ಬೆಲೆ ಹೆಚ್ಚಿದ್ದರೂ, ದಾಸ್ತಾನುಳ್ಳವರಿಗೆ ಮಾತ್ರ ಲಾಭ ಸಿಗುವಂತಾಗಿದೆ.

ಇನ್ನೂ ಹೆಚ್ಚಿನ ಬೇಡಿಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಉತ್ತರ ಕರ್ನಾಟಕ ಕಡೆ ಅಡುಗೆ, ಧಾರ್ಮಿಕ ಪೂಜೆಗಳು ಹಾಗೂ ಹಬ್ಬಗಳಲ್ಲಿ ಹೆಚ್ಚಾಗಿ ಕೊಬ್ಬರಿ ಬಳಕೆಯಾಗುತ್ತದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಣ್ಣೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ದಕ್ಷಿಣ ಕರ್ನಾಟಕ ಕಡೆ ಎಣ್ಣೆ ತಯಾರಿಕೆಯಲ್ಲಿ ಕೊಬ್ಬರಿ ಬಳಸಲಾಗುತ್ತಿದೆ. ಹೀಗಾಗಿ ಮುಂದಿನ 2 ತಿಂಗಳಲ್ಲಿ ಕೊಬ್ಬರಿ ₹20 ಸಾವಿರ ದಾಟಬಹುದು ಎನ್ನಲಾಗಿದೆ.

‘ತಾಲ್ಲೂಕಿನಲ್ಲಿ ಸುಮಾರು 46 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ತೆಂಗು ಬೆಳೆಯಾಲಾಗಿದ್ದು, ಅರ್ಧದಷ್ಟು ಭಾಗವನ್ನು ಕೊಬ್ಬರಿಗೆ ಮೀಸಲಿಡಲಾಗಿದೆ. ಬೆಲೆ ಏರಿಕೆಯ ಹಾವು–ಏಣಿಯ ಆಟಕ್ಕೆ ಕಡಿವಾಣ ಹಾಕಲು ಕೊಬ್ಬರಿ ಸಂಗ್ರಹಣೆಗಾಗಿ ಶೀತಲೀಕರಣ ಘಟಕ ಸ್ಥಾಪಿಸಬೇಕು’ ಎಂಬುದು ರೈತರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.