ಸಕಲೇಶಪುರ: ತಾಲ್ಲೂಕಿನ ಅರೆಕೆರೆ ಗ್ರಾಮದ ದೇವೀರಮ್ಮ ಸುಗ್ಗಿ ಮಹೋತ್ಸವ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಸಹಸ್ರಾರು ಭಕ್ತರ ಸುಗ್ಗಿ ಕುಣಿತದಿಂದ ಅದ್ದೂರಿಯಾಗಿ ನಡೆಯಿತು.
ಅರೆಕೆರೆ, ಜಾನೇಕೆರೆ, ಬ್ಯಾಕರವಳ್ಳಿ, ನಡಹಳ್ಳಿ, ಸುಳ್ಳಕ್ಕಿ, ಕಾಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಅರೆಕೆರೆ ಆರು ಮಂದೆ ಗ್ರಾಮಸ್ಥರು ಈ ಸುಗ್ಗಿ ಉತ್ಸವ ನಡೆಸುತ್ತಾರೆ. ರಾತ್ರಿ 12 ಗಂಟೆಯಿಂದ ನಡುರಾತ್ರಿ 1.30ರವರೆಗೂ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆಯನ್ನೂ ಸಹ ಲೆಕ್ಕಿಸದೆ ಭಕ್ತರು ಸುಗ್ಗಿ ಕಟ್ಟೆಯ ಸುತ್ತಲೂ ಕುಣಿದಿದ್ದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಈ ಬಾರಿಗೂ ಸಹ ಸುಗ್ಗಿ ಕಟ್ಟೆಯ ಮಧ್ಯದಲ್ಲಿ ದೇವೀರಮ್ಮ ಚಿಕ್ಕಮ್ಮ ಹಾಗೂ ದೊಡ್ಡಮ್ಮನನ್ನು ಉಯ್ಯಾಲೆಯಲ್ಲಿ ಕೂರಿಸುವ ಸುಗ್ಗಿ ಕಟ್ಟೆಯನ್ನು ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಸುಮಾರು 11 ಗಂಟೆಗೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವರನ್ನು ಸುಗ್ಗಿ ಕಟ್ಟೆಗೆ ಬಿಲ್ಲುಗಳನ್ನು ಹಿಡಿದು ಗ್ರಾಮಸ್ಥರು ವಾದ್ಯ ಹಾಗೂ ಸುಗ್ಗಿ ಕುಣಿತದ ಮೂಲಕ ಪ್ರವೇಶಿಸಿದರು.
ಅಡ್ಡೆಯ ಮೇಲಿನ ದೇವರನ್ನು ಕಟ್ಟೆಗೆ ತರುತ್ತಿದ್ದಂತೆ ಅಲ್ಲಿದ್ದ ಭಕ್ತರು ಎದ್ದು ನಿಂತು ಕೈ ಮುಗಿದು ಭಕ್ತಿ ಸಮರ್ಪಿಸಿದರು. ಗ್ರಾಮಸ್ಥರು ಪಟಾಕಿ ಸಿಡಿಸಿದರು. ನಂತರ ಗ್ರಾಮಸ್ಥರು ಕಟ್ಟೆಯ ಸುತ್ತಲೂ ಮೂರು ಸುತ್ತು ಬಿಲ್ಲು ಹಿಡಿದು ಕುಣಿದರು. ದೇವರನ್ನು ಉಯ್ಯಾಲೆಯಲ್ಲಿ ಬೆಳಿಗ್ಗೆ 4.30ರವರೆಗೂ ಕೂರಿಸಿ ಪೂಜೆ ಹರಕೆ ಸಲ್ಲಿಸಿದರು. ಬೆಳಿಗ್ಗೆ 4.30ರಿಂದ 5.30ರ ವರೆಗೆ ಕೆಂಡೋತ್ಸವನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.