ADVERTISEMENT

ಡಿಕೆಶಿ ನೇತೃತ್ವದಲ್ಲಿ ’ಆರೋಗ್ಯ ಹಸ್ತ’ ಅನುಷ್ಠಾನ

ಮಾಜಿ ಸಂಸದ ಧೃವ ನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:54 IST
Last Updated 9 ಸೆಪ್ಟೆಂಬರ್ 2020, 16:54 IST
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ದೃವ ನಾರಾಯಣ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್‌ ಮುಖಂಡರು ಇದ್ದರು.
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ದೃವ ನಾರಾಯಣ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್‌ ಮುಖಂಡರು ಇದ್ದರು.   

ಹಾಸನ: ರಾಜ್ಯದ 6.50 ಕೋಟಿ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಧ್ರುವನಾರಾಯಣ ಹೇಳಿದರು.

ರಾಜ್ಯದಾದ್ಯಂತ 15 ಸಾವಿರ ವಾರಿಯರ್‌ಗಳ ನೇಮಕ ಮಾಡಿದ್ದು, ಅವರಿಗೆ ₹ 1 ಲಕ್ಷದ ವಿಮೆ ಮಾಡಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಮನೆಗಳ ಹಂಚಿಕೆ ಮಾಡಲಾಗಿದೆ. ಪ್ರತಿ ತಾಲ್ಲೂಕಿಗೆ ಇಬ್ಬರು ವೈದ್ಯರ ನೇಮಿಸಿದ್ದು ಇದಕ್ಕಾಗಿ ಕೆಪಿಸಿಸಿ ₹ 6 ಕೋಟಿ ಖರ್ಚು ಮಾಡಲಿದೆ. 10 ಜಿಲ್ಲೆಗಳಲ್ಲಿ ಈಗಾಗಲೇ ಶೇ 30 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಗಂಭೀರತೆ ಅರಿಯದೆ ರಾಜ್ಯ ಸರ್ಕಾರ ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಕೋವಿಡ್‌ ನಿಯಂತ್ರಣದಲ್ಲಿ ಸಂಪೂರ್ಣ ಎಡವಿದ ಕೇಂದ್ರ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳುವಲ್ಲಿಯೂ ವಿಫಲವಾಗಿದೆ ಎಂದರು.

ADVERTISEMENT

ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಶ್ರಮಿಕ ವರ್ಗ ಸಂಕಷ್ಟ ಎದುರಿಸುವಂತಾಯಿತು. ರಾಜ್ಯದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಧೈರ್ಯ ಬಿಜೆಪಿ ಮುಖಂಡರಿಗೆ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.

ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಯ್ಯ, ಬಾಗೂರು ಮಂಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಎಸ್.ಎಂ.ಆನಂದ್, ಎಚ್.ಕೆ. ಮಹೇಶ್, ಡಾ.ಮಧುಸೂದನ್, ಬಿ.ಶಿವರಾಮು, ಸಿ.ಎಸ್.ಪುಟ್ಟೇಗೌಡ, ಗಾಯತ್ರಿ ಶಾಂತೇಗೌಡ ಇದ್ದರು.

ಶ್ರೀರಾಮುಲು ಹೆಸರಿಗಷ್ಟೆ ಆರೋಗ್ಯ ಸಚಿವ

ರಾಜ್ಯದಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ತಿಳಿಯುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಏನಾದರೂ ಮಾತನಾಡಿದರೆ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಬೇರೆ ಏನೋ ಹೇಳುತ್ತಾರೆ. ಡಾ.ಅಶ್ವತ್ಥನಾರಾಯಣ ಒಂದು ಹೇಳಿದರೆ ಆರ್.ಅಶೋಕ್ ಮತ್ತೊಂದು ಹೇಳಿಕೆ ನೀಡುತ್ತಾರೆ. ಸಂಬಂಧಪಟ್ಟ ಸಚಿವರು ಮಾಡಬೇಕಿರುವ ಕೆಲಸವನ್ನು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಮಾಡುತ್ತಿದ್ದಾರೆ. ಶ್ರೀರಾಮುಲು ಅವರು ಹೆಸರಿಗಷ್ಟೇ ಆರೋಗ್ಯ ಸಚಿವರಾಗಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.