ADVERTISEMENT

ಕೃತಕ ರಕ್ತದ ಉತ್ಪಾದನೆ ಅಸಾಧ್ಯ: ಭರತ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:32 IST
Last Updated 17 ಜೂನ್ 2025, 13:32 IST
ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು 
ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು    

ಗಂಡಸಿ: ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸುವ ಮಟ್ಟಕ್ಕೆ ವಿಜ್ಞಾನ, ತಂತ್ರಜ್ಞಾನ ಬೆಳೆದರೂ ಮನುಷ್ಯನ ಒಂದು ಹನಿ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ರೆಡ್ ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಸಭಾಪತಿ ಭರತ್ ಕುಮಾರ್ ಹೇಳಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತ ಯುವಕರ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಯುವಕರು ರಕ್ತದಾನಕ್ಕೆ ಮುಂದಾಗಬೇಕು. ತುರ್ತು ಸಂದರ್ಭದಲ್ಲಿ ಹಲವರ ಜೀವ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ ಎಂಬುದನ್ನು ಅರಿತುಕೊಳ್ಳಿ ಎಂದರು.

ADVERTISEMENT

‘ನಿತ್ಯ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಗಾಯಾಳುಗಳಿಗೆ ರಕ್ತದ ಅವಶ್ಯಕತೆಯೂ ಹೆಚ್ಚುತ್ತಿದೆ. 18 ರಿಂದ 60 ವರ್ಷ ವಯೋಮಿತಿ ಒಳಗಿನ ಆರೋಗ್ಯವಂತರು ವರ್ಷದಲ್ಲಿ 3 ಬಾರಿ ರಕ್ತದಾನ ಮಾಡಬಹುದು. ರಕ್ತದಾನದ ಮಾಡಿದ ವ್ಯಕ್ತಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬಂದು, ಯುವಕರು ರಕ್ತದಾನಕ್ಕೆ ಮುಂದಾಗಬೇಕು’ ಎಂದರು.

ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಶಬೀರ್ ಅಹ್ಮದ್, ನಿರ್ದೇಶಕ ಗಿರೀಶ್, ಮೈಸೂರು ನಾರಾಯಣ ಆಸ್ಪತ್ರೆಯ ಡಾ.ಗುಲ್ಜಾರ್, ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ, ರೆಡ್ ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಕಿಶೋರ್ ಕುಮಾರ್, ಭೀಮರಾಜು, ಉದಯ ಶಂಕರ್, ರಾಜಪ್ಪ, ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಭಾರತಿ, ತನುಜಾ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಶಿಬಿರದಲ್ಲಿ 52 ಜನರು ರಕ್ತದಾನ ಮಾಡಿದರು. 212 ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.