ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ (ಎಐಯುಟಿಯುಸಿ) ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆಸಿದ ಮೂರನೇ ದಿನದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಲತಾಕುಮಾರಿ, ‘ಆಶಾ ಕಾರ್ಯಕರ್ತೆಯರಾಗಿ ಸಮಾಜದ ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದೀರಿ. ತಮ್ಮ ಆರೋಗ್ಯದ ಕಡೆಯೂ ಹೆಚ್ಚು ಗಮನ ಹರಿಸಬೇಕು. ಮಕ್ಕಳು, ಗರ್ಭಿಣಿಯರು, ಮಹಿಳೆಯರ ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಹೆಚ್ಚಿದೆ. ಕೆಲ ದಿನಗಳಿಂದ ನಿಮ್ಮ ಬೇಡಿಕೆ ಈಡೇರಿಕೆಗೆ ಧರಣಿ ನಡೆಸಿದ್ದು, ನಿಮ್ಮ ಬೇಡಿಕೆ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿ ಮಾಸಿಕ ₹ 10ಸಾವಿರ ವೇತನ ನೀಡುವಂತೆ ಆಶಾ ಕಾರ್ಯಕರ್ತೆಯರು ಮೂರು ದಿನಗಳ ಧರಣಿ ಹಮ್ಮಿಕೊಂಡಿದ್ದು, ಮಳೆ, ಚಳಿ ಲೆಕ್ಕಿಸದೇ ಕಾರ್ಯಕರ್ತೆಯರು ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಕೂಡಲೇ ಬೇಡಿಕೆ ಈಡೇರಿಸುವಂತೆ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಹನುಮೇಶ್ ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನಾಗಲಕ್ಷ್ಮಿ, ಲೇಖಕಿ ರೂಪ ಹಾಸನ, ಭಾನುಮತಿ, ಮಮತಾ ಶಿವು, ಪುಷ್ಪಾ, ನವೀನ್, ಶಿವಮ್ಮ ಹಾಗೂ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.