ADVERTISEMENT

‌ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ

ಶಿಳ್ಳೆಕ್ಯಾತ ಜನಾಂಗಾಭಿವೃದ್ಧಿ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 13:39 IST
Last Updated 21 ಜೂನ್ 2019, 13:39 IST

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದವನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಶಿಳ್ಳೆಕ್ಯಾತ ಜನಾಂಗಾಭಿವೃದ್ಧಿ ವೇದಿಕೆ ಅಧ್ಯಕ್ಷ ಬಿ.ಎಚ್‌.ಮಂಜುನಾಥ್‌ ಆಗ್ರಹಿಸಿದರು.

ಶಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿ ಮೇಲೆ ರವಿ ಎಂಬಾತ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಅನಾಥೆಯಾಗಿದ್ದು, ಕಣ್ಣು ಕಾಣದ ಹಾಗೂ ಕಿವಿಯೂ ಕೇಳದ ಅಜ್ಜಿ ಜತೆಗೆ ವಾಸವಿದ್ದಾಳೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಈ ಸಂಬಂಧ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ADVERTISEMENT

ಭೀಮ್‌ ಆರ್ಮಿ ತಂಡದ ರಾಜ್ಯ ಕಾರ್ಯಾಧ್ಯಕ್ಷ ಸಂಪತ್‌ ಸುಬ್ಬಯ್ಯ ಮಾತನಾಡಿ, ಜಿಲ್ಲೆಯ ನಾಗರಿಕ ಸಮುದಾಯ ತಲೆ ತಗ್ಗಿಸುವಂತಹ ಅಮಾನುಷ ಘಟನೆ ನಡೆದಿದೆ. ಈ ರೀತಿಯ ಘಟನೆಗಳು ಮರುಕಳುಹಿಸುತ್ತಿದ್ದು, ಮಹಿಳೆ ಮತ್ತು ಮಕ್ಕಳು ಮನೆಯಿಂದ ಹೊರಬರುವುದೇ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ₹ 5 ಲಕ್ಷ ಪರಿಹಾರ, ಸಂಪೂರ್ಣ ಶಿಕ್ಷಣ ಮತ್ತು ಸರ್ಕಾರಿ ಕೆಲಸ ಸಿಗುವವರೆಗೆ ಎಲ್ಲ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟರೂ ಶ್ರೀನಿವಾಸ್ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಸರ್ಕಾರ ನಿಗಾವಹಿಸಬೇಕು. ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ಲಿಂಗರಾಜು, ಭಾನುಪ್ರಕಾಶ್‌, ರಾಜಶೇಖರ್‌ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.