ADVERTISEMENT

ಟವರ್‌ ಏರಿ ದಂಪತಿ ಆತ್ಮಹತ್ಯೆಗೆ ಯತ್ನ

ಬೇಲೂರು ತಾಲ್ಲೂಕಿನ ದೇವರಾಜಪುರದ ಸರ್ಕಾರಿ ಜಮೀನು ಉಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:24 IST
Last Updated 14 ನವೆಂಬರ್ 2020, 4:24 IST
ಬೇಲೂರಿನ ನೆಹರೂನಗರದಲ್ಲಿ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ
ಬೇಲೂರಿನ ನೆಹರೂನಗರದಲ್ಲಿ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ   

ಬೇಲೂರು: ‘ಗ್ರಾಮದ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ರಕ್ಷಿಸಲು ಮುಂದಾದ ನಮಗೆ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಗಂಡ–ಹೆಂಡತಿ ಇಬ್ಬರೂ ಪಟ್ಟಣದ ನೆಹರೂನಗರದಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿ ಕೆಲ ಕಾಲ ಆತಂಕ ಸೃಷ್ಟಿಸಿದರು.

ತಾಲ್ಲೂಕಿನ ದೇವರಾಜಪುರದ ಮೋಹನ್‌ರಾಜ್ ಮತ್ತು ಚಂದನ ದಂಪತಿ ಶುಕ್ರವಾರ ಮುಂಜಾನೆ ಟವರ್ ಏರಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೇದರಿಕೆ ಹಾಕಿದರು.

‘ಗ್ರಾಮದ ಸರ್ವೇ ನಂಬರ್‌ 101ರಲ್ಲಿ ಮೂರು ಎಕರೆ ಭೂಮಿಯಿದೆ. ಇದರಲ್ಲಿ 1.70 ಎಕರೆ ಒತ್ತುವರಿಯಾಗಿದೆ. ಉಳಿದ 1.30 ಎಕರೆ ಭೂಮಿಯಲ್ಲಿ ಸ್ಮಶಾನ, ಸಮುದಾಯ ಭವನ, ದೇಗುಲ, ಅಂಗನವಾಡಿ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬದಿಂದ ₹500 ರಿಂದ ₹2 ಸಾವಿರದವರಗೆ ಹಣ ಸಂಗ್ರಹಿಸಿದ್ದೆವು. ಆದರೆ, ಕೆಲವರು ನಮಗೆ ತಿಳಿಯದಂತೆ ಮೋಸ ಮಾಡಿ ತಮ್ಮ ಹೆಸರಿಗೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದುಮೋಹನ್‌ರಾಜ್ ಆರೋಪಿಸಿದರು.

ADVERTISEMENT

‘ಸ್ಥಳದಲ್ಲಿ ಮನೆಯನ್ನೂ ಅಕ್ರಮವಾಗಿ ಕಟ್ಟಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರಿಂದ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಆ ಮನೆ ಕೆಡವಿಸಿದರು. ಇದರಿಂದ ಸಿಟ್ಟಾಗಿ ಅವರು ನಮ್ಮ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ. ನಮಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ತಹಶಿಲ್ದಾರ್ ಎನ್.ವಿ.ನಟೇಶ್, ಟವರ್‌ ಮೇಲಿದ್ದ ಮೋಹನ್‌ರಾಜ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿ, ‘ಸರ್ಕಾರಿ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಭರವಸೆ ನೀಡಿ, ಮನವೊಲಿಸಿದ ನಂತರ ದಂಪತಿ ಟವರ್ ಮೇಲಿಂದ ಕೆಳಗೆ ಇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.