ಹಾಸನ: ರಾಜ್ಯ ಹಣಕಾಸು ಆಯೋಗ ಮತ್ತು ಮಹಾನಗರಪಾಲಿಕೆ ಅನುದಾನದ ಅಡಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನವನ್ನು ಶಾಸಕ ಸ್ವರೂಪ್ ಪ್ರಕಾಶ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಂಗವಿಕಲರಿಗೆ ರಾಜ್ಯ ಹಣಕಾಸು ಆಯೋಗ ಹಾಗೂ ಮಹಾನಗರ ಪಾಲಿಕೆ ಅಡಿಯಲ್ಲಿ ಹಣವನ್ನು ಕಾಯ್ದಿರಿಸಿ ತ್ರಿ ಚಕ್ರ ವಾಹನಗಳನ್ನು ನೀಡಲಾಗುತ್ತಿದೆ ಎಂದರು.
ವಿವಿಧ ಕಾರಣಗಳಿಂದ ಅಂಗಾಂಗ ಕಳೆದುಕೊಂಡಿರುವ ಮಹಿಳೆಯರು ಹಾಗೂ ಪುರುಷರು ಕೂಡ ಇಂದು ಸಣ್ಣ ಪುಟ್ಟ ಕೆಲಸಗಳು ಹಾಗೂ ಉದ್ಯಮಗಳನ್ನು ನಡೆಸಿಕೊಂಡು ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಓಡಾಡಲು ತ್ರಿಚಕ್ರ ವಾಹನಗಳು ಅನುಕೂಲವಾಗಲಿದ್ದು, ಬದುಕು ಕಟ್ಟಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಹಕಾರ ಬ್ಯಾಂಕ್‌ನಲ್ಲಿ ಕೂಡ ಅಂಗವಿಕಲರಿಗೆ ವಿವಿಧ ಉದ್ಯಮಕ್ಕೆ ಸಾಲ ಸೌಲಭ್ಯವೂ ಲಭ್ಯವಿದೆ. ಅವುಗಳನ್ನು ಬಳಸಿಕೊಂಡು ತಾವು ಕೂಡ ಎಲ್ಲರಂತೆ ಆರ್ಥಿಕ, ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಎಂದು ಸಲಹೆ ನೀಡಿದರು.
ಮೇಯರ್ ಚಂದ್ರಗೌಡ ಮಾತನಾಡಿ, 19 ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಇದನ್ನು ಮಂಜೂರು ಮಾಡಿಕೊಟ್ಟ ಸರ್ಕಾರ ಹಾಗೂ ಸಹಕಾರ ನೀಡಿದ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಉಪ ಮೇಯರ್ ಹೇಮಲತಾ, ಆಯುಕ್ತ ಕೃಷ್ಣಮೂರ್ತಿ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.