
ಹಾಸನ: ತೊಗಲುಗೊಂಬೆ ಆಟವನ್ನು ಹಳ್ಳಿಯಿಂದ ದಿಲ್ಲಿಯವರೆಗೂ ಪ್ರದರ್ಶಿಸಿ, ವಿದೇಶಗಳಲ್ಲಿಯೂ ಪಸರಿಸಿದ ಹೂವಿನಹಳ್ಳಿಕಾವಲು ಗ್ರಾಮದ ಗುಂಡೂರಾಜ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಗ್ರಾಮದ ರಾಮಯ್ಯ ಮತ್ತು ಹನುಮಮ್ಮ ದಂಪತಿಯ ಪುತ್ರನಾಗಿ 1959ರಲ್ಲಿ ಜನಿಸಿದ ಗುಂಡೂರಾಜ್ ಅವರದ್ದು ಕಲಾವಿದರ ಕುಟುಂಬ. ಶಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ ಇವರ ಪೂರ್ವಜರು ಕಾಲದಿಂದಲೂ ತೊಗಲು ಗೊಂಬೆ ಆಟವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ.
ತಂದೆ-ತಾಯಿಯಿಂದ ಈ ಕಲೆಯನ್ನು ಕರಗತ ಮಾಡಿಕೊಂಡ 9ನೇ ತಲೆಮಾರಿನವರಾದ ಗುಂಡೂರಾಜ್, ಅಂತರ ರಾಷ್ಟ್ರೀಯ ಮಟ್ಟದ ಸಾಂಪ್ರದಾಯಿಕ ತೊಗಲು ಗೊಂಬೆಯಾಟದ ಕಲಾವಿದರಾಗಿ ರೂಪುಗೊಂಡಿದ್ದಾರೆ.

ಪ್ರಶಸ್ತಿಯ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಸರ್ಕಾರ ನನ್ನ ಕಲೆ ಪ್ರತಿಭೆಯನ್ನು ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಕಲೆಗೆ ಸಂದ ಗೌರವವಾಗಿದೆಗುಂಡೂರಾಜ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ
50 ವರ್ಷಗಳಿಂದ ರಾಮಾಯಣ, ಮಹಾಭಾರತ, ಪೌರಾಣಿಕ, ಐತಿಹಾಸಿಕ ಪ್ರಸಂಗಗಳನ್ನು ಗೊಂಬೆಯಾಟದ ಮೂಲಕ ದೇಶದಾದ್ಯಂತ ಪ್ರದರ್ಶಿಸುತ್ತ, ಜನಮಾನಸಕ್ಕೆ ಮನರಂಜನೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಬೊಂಬೆಯಾಟದ ಮೂಲಕವೇ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶಿಸುತ್ತ ಜನಜಾಗೃತಿ ಮೂಡಿಸುತ್ತಿದ್ದಾರೆ.
ಅವಸಾನದ ಅಂಚಿನಲ್ಲಿರುವ ತೊಗಲುಗೊಂಬೆ ಕಲೆಯನ್ನು ದೇಶದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುತ್ತಿರುವುದಲ್ಲದೇ, ಕಾರ್ಯಾಗಾರದ ಮೂಲಕ ಆಸಕ್ತ ಯುವಜನತೆಗೆ ತರಬೇತಿ ನೀಡುತ್ತಿದ್ದಾರೆ. ಚಿತ್ರಕಲೆಯಲ್ಲಿಯೂ ವಿಶೇಷ ಪರಿಶ್ರಮ ಹೊಂದಿರುವ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಅಂಬೇಡ್ಕರ್ ವಿಶ್ವವಿದ್ಯಾಲಯ ಮುಂತಾದ ಕಡೆ ಪಾರಂಪರಿಕ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ.
ಅಮೆರಿಕ, ಕುವೈತ್, ಕೊರಿಯಾ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಫ್ರಾನ್ಸ್, ಪೋಲೆಂಡ್ ಮುಂತಾದ ದೇಶಗಳಲ್ಲಿಯೂ ಕಾರ್ಯಕ್ರಮ ನೀಡಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೊರಿಯಾ ದೇಶದಲ್ಲಿ ನಡೆದ 3ನೇ ಡೆಲಿಫಿಕ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಶ್ಯಾಡೋಪ್ಲೇ ಪ್ರದರ್ಶಿಸಿ ‘ಮಾರ್ನಿಂಗ್ ಮೆಡಲ್’ ಪ್ರಶಸ್ತಿಯೊಂದಿಗೆ ಬೆಳ್ಳಿ ಪದಕ ಗಳಿಸಿದ್ದಾರೆ. ಇಂಡಿಯಾ ಕುವೈತ್ ಉತ್ಸವದಲ್ಲಿ ಭಾಗವಹಿಸಿ ಕುವೈತ್‌ನ ಕನ್ನಡ ಕಲಾಕೂಟದ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಯಕ್ಷಗಾನ ಅಕಾಡೆಮಿಯಿಂದ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯಿಂದ ಸುವರ್ಣ ಕರ್ನಾಟಕ ರಂಗಮಲ್ಲಿಗೆ ಪ್ರಶಸ್ತಿ, ಕರ್ನಾಟಕ ಜಾನಪದ ಕೌನ್ಸಿಲ್ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್‌ನಿಂದ ಎಸ್.ಕೆ. ಕರೀಂಖಾನ್ ಪ್ರಶಸ್ತಿ ಸಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.