ADVERTISEMENT

ಅನಕೃ ತವರೂರಲ್ಲಿ ನೆನಪಿನ ಕಾರ್ಯಕ್ರಮ

ಸಾಹಿತಿ ಬಿ.ಯು. ಗೀತಾಗೆ ಅನಕೃ ಪ್ರಶಸ್ತಿ ಪ್ರದಾನ ಇಂದು

ಜಿ.ಚಂದ್ರಶೇಖರ್‌
Published 23 ಜುಲೈ 2022, 16:39 IST
Last Updated 23 ಜುಲೈ 2022, 16:39 IST
ಅರಕಲಗೂಡಿನಲ್ಲಿ ಅನಕೃ ಹೆಸರಿನಲ್ಲಿ ನಿರ್ಮಿಸಿರುವ ವೃತ್ತ ಮತ್ತು ಪ್ರತಿಮೆ
ಅರಕಲಗೂಡಿನಲ್ಲಿ ಅನಕೃ ಹೆಸರಿನಲ್ಲಿ ನಿರ್ಮಿಸಿರುವ ವೃತ್ತ ಮತ್ತು ಪ್ರತಿಮೆ   

ಅರಕಲಗೂಡು: ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾದ ಅನಕೃ (ಅರಕಲಗೂಡು ನರಸಿಂಗರಾವ್ ಕೃಷ್ಣರಾವ್) ಅರಕಲಗೂಡಿನ ಅಸ್ಮಿತೆ ಎನಿಸಿದ್ದಾರೆ.

ಕಾದಂಬರಿಗಳ ಮೂಲಕ ಕನ್ನಡದ ಓದುಗ ವರ್ಗವನ್ನು ಹುಟ್ಟುಹಾಕಿದ ಇವರು ಕನ್ನಡದ ಹುಟ್ಟು ಹೋರಾಟಗಾರ. ಕರ್ನಾಟಕ ಏಕೀಕರಣ ಚಳವಳಿ, ಬೆಂಗಳೂರಿನಲ್ಲಿ ಪರಭಾಷೆ ಚಿತ್ರಗಳ ಹಾವಳಿ ವಿರುದ್ದ 60 ರ ದಶಕದಲ್ಲಿ ನಡೆದ ಚಳವಳಿ, ರಾಮನವಮಿ ಸಂಗೀತೋತ್ಸವದಲ್ಲಿ ಕನ್ನಡ ಕೃತಿಗಳ ಗಾಯನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಹೀಗೆ ಕನ್ನಡದ ಉಳಿವಿಗಾಗಿ ನಿರಂತರ ಶ್ರಮಿಸಿದ ಅನಕೃ ಸಾಧನೆಗಳು ಅನನ್ಯ.

ಇವರ ತವರು ಅರಕಲಗೂಡಿನಲ್ಲಿ ಅನಕೃ ಅವರನ್ನು ನೆನಪಿಸುವ ಕಾರ್ಯ ಒಂದಲ್ಲ ಒಂದು ವಿಧದಲ್ಲಿ ನಡೆಯುತ್ತ ಬಂದಿದೆ. ಇದರಲ್ಲಿ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಅಭಿಮಾನಿಗಳ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುವ ‘ಅನಕೃ ಒಂದು ನೆನಪು’ ಹಾಗೂ ‘ಅನಕೃ ಪ್ರಶಸ್ತಿ’ ಪ್ರದಾನ ಸಮಾರಂಭ ಪ್ರಮುಖವಾದುದು. 2013 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಎರಡು ವರ್ಷ ಕೋವಿಡ್ ಹೊರತು ಪಡಿಸಿ ನಿರಂತರವಾಗಿ ನಡೆದು ಬಂದಿದೆ.

ADVERTISEMENT

ತವರೂರಿನ ಸಾಹಿತಿಯ ಸಾಹಿತ್ಯ ಕೃಷಿ, ಹೋರಾಟದ ಹಾದಿ, ನಾಡು, ನುಡಿಗೆ ಇವರು ನೀಡಿದ ಕೊಡುಗೆ ಕುರಿತು ಚಿಂತನ–ಮಂಥನ ನಡೆಯುತ್ತದೆ. ಜೊತೆಗೆ ಸಾಧಕರನ್ನು ಗುರುತಿಸಿ ಅವರಿಗೆ ಅನಕೃ ಹೆಸರಿನ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವೂ ನಡೆಯುತ್ತಿದೆ. ಈವರೆಗೆ ಸಾಹಿತಿಗಳಾದ ಬಿ.ಎಸ್.ಕೇಶವರಾವ್, ಡಾ.ದೊಡ್ಡರಂಗೇಗೌಡ, ಕವಿ ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ, ಪ್ರೊ ಜಿ.ಎಸ್. ಸಿದ್ದಲಿಂಗಯ್ಯ, ರಂಗ ಕರ್ಮಿ ಮಾಸ್ಟರ್ ಹಿರಣ್ಣಯ್ಯ, ಸರ್ಕಾರಿ ಆಧಿಕಾರಿ ಡಾ ಮಧುಕೇಶ್ವರ್ ಸೇರದಂತೆ 6 ಮಂದಿ ಅನಕೃ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಾರಿ ಸಾಹಿತಿ ಬಿ.ಯು. ಗೀತಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜುಲೈ 24ರಂದು ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಾಹಿತಿ ಗೀತಾ ಪರಿಚಯ

1962 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬಿ.ಯು ಗೀತಾ ನ್ಯಾಷನಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಸ್ (ಸಂವಹನ) ಪದವಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರತ್ನ ಪದವಿ ಪಡೆದಿದ್ದಾರೆ.

ಸೋಲು ಗೆಲುವಿನ ಹಾದಿಯಲ್ಲಿ, ಮರೀಚಿಕೆ, ಹೊಂಗೆಯ ನೆರಳು, ಆರದಿರಲಿ ಬೆಳಕು, ತಮ ಸೋಮ ಜ್ಯೋತಿರ್ಗಮಯ, ಇರುವುದೆಲ್ಲವ ಬಿಟ್ಟು, ಅದೇ ಏಕಾಂತ ಸೇರಿದಂತೆ 16 ಕೃತಿಗಳನ್ನು ರಚಿಸಿದ್ದಾರೆ. ನಾಡಿನ ಪ್ರಮುಖ ವಾರ ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಧಾರಾವಾಹಿಯಾಗಿ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.

ಟಿವಿ ವಾಹಿನಿಯ ಮನ್ವಂತರ, ಮುಕ್ತಾ, ಮೌನರಾಗ, ಗುಪ್ತಗಾಮಿನಿ, ಜಗಳಗಂಟಿಯರು, ಮುಗಿಲು, ಸುಪ್ರಭಾತ ಧಾರಾವಾಹಿಗಳಿಗೆ ಕಥೆ ಸಂಭಾಷಣೆ ರಚಿಸಿದ್ದಾರೆ. ಇದಲ್ಲದೆ ಹಲವು ವಾಹಿನಿಗಳಲ್ಲಿ ಸಂದರ್ಶನ ನಡೆಸಿ ಕೊಡುತ್ತಿದ್ದಾರೆ. ಪತಿ ಶಾರದಾ ಪ್ರಸಾದ್, ಪೂಜಿತಾ, ರಘುನಂದನ, ಪ್ರಾರ್ಥನಾ ಮೂವರು ಮಕ್ಕಳ ಕುಟುಂಬ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಂದು

ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮವನ್ನು ಶಾಸಕ ಎ.ಟಿ. ರಾಮಸ್ವಾಮಿ ಉದ್ಘಾಟಿಸಲಿದ್ದು, ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ, ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕಿ ಲೀಲಾವತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಸಿದ್ ಭಾಗವಹಿಸುವರು.

ಕಾರ್ಯಕ್ರಮಕ್ಕೆ ಮುನ್ನ ಕೊತ್ತಲು ಗಣಪತಿ ಉದ್ಯಾನದಿಂದ ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.