ADVERTISEMENT

ಶಿಶು ಅಪಹರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 16:01 IST
Last Updated 19 ಮಾರ್ಚ್ 2022, 16:01 IST

ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ನವಜಾತ ಶಿಶುವಿನ ಅಪಹರಣ ಹಾಗೂ ತಾಲ್ಲೂಕಿನ ಬೆಳವಾಡಿ ಬಳಿ ಕಾರಿನಲ್ಲಿ ಮೃತದೇಹ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

‘ಮಾರ್ಚ್ 13 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುವಿನ ಅಪಹರಣ ನಡೆದಿತ್ತು. ಮೈಸೂರಿಗೆ ವಿವಾಹ ಮಾಡಿಕೊಡಲಾಗಿದ್ದ ತಾಲ್ಲೂಕಿನ ಕಣಿಯಾರು ಕೊಪ್ಪಲು ಗ್ರಾಮದ ಯುವತಿಗೆ ಒಂಬತ್ತು ವರ್ಷಗಳಿಂದ ಮಕ್ಕಳಿರಲಿಲ್ಲ. ಮಗಳ ಬದುಕನ್ನು ಹಸನುಗೊಳಿಸಬೇಕೆಂಬ ಉದ್ದೇಶದಿಂದ ಯುವತಿಯ ತಾಯಿ, ಸಹೋದರ, ಸಹೋದರಿ ಮತ್ತು ಆಕೆಯ ಸ್ನೇಹಿತೆ ಸೇರಿ ಮಗುವನ್ನು ಅಪಹರಿಸಿದ್ದರು. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭಾನುವಾರ ರಾತ್ರಿ ಆಸ್ಪತ್ರೆಗೆ ಬಂದ ಆರೋಪಿಗಳು ನವಜಾತ ಶಿಶುವಿಗಾಗಿ ಶೋಧ ನಡೆಸಿದ್ದಾರೆ. ರಾತ್ರಿ 12 ಗಂಟೆ ಸಮಯದಲ್ಲಿ ಕೂಲಿಕಾರ್ಮಿಕ ಮಹಿಳೆಯ ಗಂಡು ಮಗುವನ್ನುಅಪಹರಿಸಿದ್ದಾರೆ. ಯುವತಿ ಸಹೋದರ ಮಗುವನ್ನು ವಾಹನದಲ್ಲಿ ಕರೆದೊಯ್ದು ಕಣಿಯಾರು ಗ್ರಾಮದ ತೋಟದ ಮನೆಯಲ್ಲಿ ಇರಿಸಿದ್ದಾನೆ. ಬಳಿಕ ಆಸ್ಪತ್ರೆಗೆ ಬಂದು ಮಹಿಳೆಯರನ್ನು ಕರೆದೊಯ್ದು ಮಗುವನ್ನು ಮೈಸೂರಿಗೆ ಸಾಗಿಸಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ತಾಲ್ಲೂಕಿನ ಬೆಳವಾಡಿ ಬಳಿ ಸುಟ್ಟ ಕಾರಿನಲ್ಲಿ ಮೃತದೇಹ ಪತ್ತೆ ಪ್ರಕರಣ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿದೆ. ಪಿರಿಯಾಪಟ್ಟಣದ ಯುವತಿಯನ್ನು ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹ ಪೂರ್ವದಲ್ಲಿ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ, ಇದನ್ನು ಮುಂದುವರೆಸುವಂತೆ ಬಲವಂತ ಮಾಡುತ್ತಿದ್ದ. ವಿಷಯ ತಿಳಿದ ಪತಿ, ಸ್ನೇಹಿತರೊಂದಿಗೆ ಸೇರಿ ಆಕೆಯಿಂದ ದೂರವಾಣಿ ಕರೆ ಮಾಡಿಸಿ ಆರೋಪಿಯನ್ನು ಕರೆಸಿಕೊಂಡು ಹತ್ಯೆ ಮಾಡಿ,ಕಾರಿನಲ್ಲಿ ಶವ ಇರಿಸಿ ಸುಟ್ಟು ಹಾಕಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ’ ಎಂದರು.

‘ಮಗು ಅಪಹರಣ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಈ ಕುರಿತು ಆಡಳಿತಾಧಿಕಾರಿಗಳು ಎಚ್ಚರ ವಹಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಸಿದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.