ADVERTISEMENT

ಆಲೂರು | ದುರ್ವಾಸನೆ: ನಿವಾಸಿಗಳಿಗೆ ರೋಗದ ಆತಂಕ

ಸೆಪ್ಟಿಕ್‌ ಟ್ಯಾಂಕ್‌ ತುಂಬಿ ಚರಂಡಿಗೆ ಹರಿಯುತ್ತಿರುವ ಕೊಳಚೆ ನೀರು

ಎಂ.ಪಿ.ಹರೀಶ್
Published 1 ಜೂನ್ 2025, 6:01 IST
Last Updated 1 ಜೂನ್ 2025, 6:01 IST
ಆಲೂರು ಬಸ್ ನಿಲ್ದಾಣದ ಶೌಚಾಲಯದ ಪಕ್ಕದಲ್ಲಿ ಸೆಪ್ಟಿಕ್ ಟ್ಯಾಂಕ್ ಇರುವ ಜಾಗದಲ್ಲಿ ಗಿಡಗಂಟಿಗಳು ಬೆಳೆದಿವೆ.
ಆಲೂರು ಬಸ್ ನಿಲ್ದಾಣದ ಶೌಚಾಲಯದ ಪಕ್ಕದಲ್ಲಿ ಸೆಪ್ಟಿಕ್ ಟ್ಯಾಂಕ್ ಇರುವ ಜಾಗದಲ್ಲಿ ಗಿಡಗಂಟಿಗಳು ಬೆಳೆದಿವೆ.   

ಆಲೂರು: ಪಟ್ಟಣದ ಬಸ್ ನಿಲ್ದಾಣದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕೊಳಚೆ ನೀರು ಭರ್ತಿಯಾಗಿದ್ದು, ಹೆಚ್ಚುವರಿ ನೀರು 8 ನೇ ವಾರ್ಡ್‌ನಲ್ಲಿ ನಿವಾಸಿಗಳಿರುವ ಚರಂಡಿಯಲ್ಲಿ ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು, ರೋಗಗಳು ಹರಡುವ ಆತಂಕ ಎದುರಾಗಿದೆ.

ಪರ್ಯಾಯ ಮಾರ್ಗವಿಲ್ಲದೇ ಸೆಪ್ಟಿಕ್ ಟ್ಯಾಂಕ್‌ನ ನಂತರ ಹೆಚ್ಚುವರಿ ನೀರು, ನಿವಾಸಿಗಳಿರುವ ಮನೆಗಳ ಮುಂದೆ ಚರಂಡಿಯಲ್ಲಿಯೇ ಹರಿಯಬೇಕು. ಈವರೆಗೆ ಚರಂಡಿಯನ್ನು ಸಿಮೆಂಟ್ ಸ್ಲ್ಯಾಬ್ ಬಳಸಿ ಮುಚ್ಚಲಾಗಿತ್ತು. ಕೆಲ ದಿನಗಳ ಹಿಂದೆ ಸ್ಲ್ಯಾಬ್ ತುಂಡಾಗಿದ್ದು, ಕೊಳಚೆ ನೀರು ಹರಿಯುವಾಗ ದುರ್ವಾಸನೆ ಉಂಟಾಗುತ್ತಿದೆ. ಈ ಕಾರಣದಿಂದ ಸ್ಥಳೀಯರು ಸೆಪ್ಟಿಕ್ ಟ್ಯಾಂಕ್‌ನಿಂದ ನೀರು ಹರಿದು ಬರುವ ಕೊಳವೆಯನ್ನು ಮುಚ್ಚಿ ದುರ್ವಾಸನೆಯಿಂದ ಸದ್ಯಕ್ಕೆ ಪಾರಾಗಿದ್ದಾರೆ.

ಸೆಪ್ಟಿಕ್ ಟ್ಯಾಂಕ್‌ನಿಂದ ಹೊರ ಬರುವ ನೀರು ಚರಂಡಿಗೆ ಹರಿಯದೇ ಕಾಂಪೌಂಡ್ ಬಳಿ ನಿಲ್ಲುತ್ತಿದ್ದು, ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆ. ಸೆಪ್ಟಿಕ್ ಟ್ಯಾಂಕ್ ಇರುವ ಜಾಗದಲ್ಲಿ ಸೆಸ್ಕ್ ಇಲಾಖೆಗೆ ಸೇರಿದ ವಿದ್ಯುತ್‌ ಪರಿವರ್ತಕವಿದೆ. ಗಿಡಗಂಟೆಗಳು ಬೆಳೆದು ಹಾವು, ವಿಷಜಂತುಗಳು ವಾಸ ಮಾಡುವ ತಾಣವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ADVERTISEMENT

ಸೆಪ್ಟಿಕ್ ಟ್ಯಾಂಕ್‌ನಿಂದ ಹೊರ ಬರುತ್ತಿದ್ದ ನೀರು, ಸರಾಗವಾಗಿ ಚರಂಡಿಗೆ ಹರಿದು ಹೋಗುವಂತೆ ಮಾಡಿ, ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸಬೇಕು. ಗಿಡಗಂಟೆಗಳನ್ನು ಕತ್ತರಿಸಿ, ಸುಂದರವಾದ ಹೂ ತೋಟ ಮಾಡಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.  

ಬಸ್ ನಿಲ್ದಾಣದ ಸೆಪ್ಟಿಕ್ ಟ್ಯಾಂಕ್‌ನಿಂದ ಕೊಳಚೆ ನೀರು ಹರಿಯುವ ಜಾಗವನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ತೋರಿಸಿದರು.
ಸೆಪ್ಟಿಕ್ ಟ್ಯಾಂಕ್‌ ನೀರಿನಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದು ಸೊಳ್ಳೆಗಳ ಉತ್ಪತ್ತಿಯಾಗಿ ರೋಗ ರುಜಿನಗಳು ಉಂಟಾಗುತ್ತವೆ. ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯರು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ.
ಹರೀಶ್ ನಾಜರೆ ಆಲೂರು ಪ.ಪಂ. ಸದಸ್ಯ
ಸೆಪ್ಟಿಕ್ ಟ್ಯಾಂಕ್‌ನಿಂದ ನೀರು ಹೊರ ಹೋಗುವ ಸ್ಥಳ ಪರಿಶೀಲಿಸಲಾಗಿದೆ. ಕೂಡಲೇ ನೀರು ಸರಾಗವಾಗಿ ಚರಂಡಿಗೆ ಹರಿಯುವಂತೆ ಮಾಡಿ ಸ್ಲ್ಯಾಬ್ ಅಳವಡಿಸಲಾಗುವುದು. ಗಿಡಗಂಟೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಯಾದವ್ ಸಾರಿಗೆ ಇಲಾಖೆ ಎಂಜಿನಿಯರ್
ಕೊಳಚೆ ನೀರು ಮನೆ ಮುಂದೆ ಹರಿಯುತ್ತಿದ್ದು ಚರಂಡಿ ಮೇಲೆ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ತುಂಡಾಗಿದ್ದು ದುರ್ವಾಸನೆ ತಡೆಯದಾಗಿದೆ. ಸದ್ಯಕ್ಕೆ ನೀರು ಬರುವ ಕೊಳವೆ ಮುಚ್ಚಿದ್ದೇವೆ. ಸ್ಲ್ಯಾಬ್ ಹಾಕಿ ಕೊಳವೆ ಬಾಯಿ ತೆರೆಯಲಿ.
ಜಮೀನಾಬಿ 8 ನೇ ವಾರ್ಡ್ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.