ADVERTISEMENT

ಬಗರ್ ಹುಕುಂ: 2.27 ಲಕ್ಷ ಅರ್ಜಿಗಳ ತಿರಸ್ಕಾರ

ಬಡ ರೈತರಿಗೆ ಮಾಡುವ ಅನ್ಯಾಯ: ಕರ್ನಾಟಕ ಪ್ರಾಂತ ರೈತ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:09 IST
Last Updated 12 ಡಿಸೆಂಬರ್ 2024, 16:09 IST

ಹಾಸನ: ಬಗರ್‌ ಹುಕುಂ ಅಡಿ ಸಲ್ಲಿಸಿದ 2.27 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿರುವುದಾಗಿ ಕಂದಾಯ ಸಚಿವರು ಮಾಹಿತಿ ನೀಡಿದ್ದು, ಇದು ಬಡ ರೈತರಿಗೆ ಮಾಡಿರುವ ಅನ್ಯಾಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಹಾಸನ ಜಿಲ್ಲಾ ಸಮಿತಿ ಹೇಳಿದೆ.

ಬೆಳಗಾವಿ ಅಧಿವೇಶನದಲ್ಲಿ ಮಾಹಿತಿ ನೀಡಿರುವ ಸಚಿವರು, ಅರ್ಜಿ ನಮೂನೆ 50, 53, 57 ರ ಅಡಿ ಹಾಕಿದವರಲ್ಲಿ 2.27 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ವಯಸ್ಸು ಕಡಿಮೆ, ಗುಂಡುತೋಪು, ದೇವರಕಾಡು, ಸಾರ್ವಜನಿಕ ಉದ್ದೇಶ ಹಾಗೂ ಬಫರ್ ಜೋನ್‍ನಲ್ಲಿ ಬರುವವರೆಂದು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಇದನ್ನು ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡುವ ಅಕ್ರಮ– ಸಕ್ರಮ ಸಮಿತಿಗಳ ಮುಂದೆ ಬರುವ ಮುಂಚೆಯೇ ಅಧಿಕಾರಿಗಳು ತಿರಸ್ಕರಿಸುತ್ತಿದ್ದು, ಇದು ಅಕ್ರಮ ಎಂದು ಖಂಡಿಸಿದೆ.

ಅರಣ್ಯವೆಂದು 12 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪಹಣಿಗಳಲ್ಲಿ ಸರ್ಕಾರ ಎಂದಿದೆ.  ಆದರೆ ಡಯಾಗ್ಲಾಟ್‍ನಲ್ಲಿ ಅರಣ್ಯ ಎಂದಿದೆ ಎಂದು ಹೇಳಲಾಗುತ್ತದೆ. ಇವುಗಳಲ್ಲಿ ಯಾವುದು ಸರಿಯಾದ ದಾಖಲೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದೆ.

ADVERTISEMENT

ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು 99 ವರ್ಷಗಳ ಕೃಷಿಗಾಗಿ ಗುತ್ತಿಗೆ ಆಧಾರದಲ್ಲಿ ನೀಡುವ ಸರ್ಕಾರ, ಬಡ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೇ ಅಥವಾ ಸಾಗುವಳಿಗೆ ಅವಕಾಶ ನೀಡದೇ ಒಕ್ಕಲೆಬ್ಬಿಸುವ ತಾರತಮ್ಯ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಹೇಳಿದೆ.

ನಗರ, ಪಟ್ಟಣ, ಪಂಚಾಯಿತಿ ಪ್ರದೇಶಗಳು ವಿಸ್ತರಣೆಯಾದಂತೆ ಸಾಗುವಳಿದಾರರು ಅವುಗಳ ಮಿತಿಯೊಳಗೆ ಬರುತ್ತಿದ್ದು, ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅಂತಹ ಅರ್ಜಿಗಳನ್ನು ತಿರಸ್ಕರಿಸುವ ಬದಲು, ವಿಶೇಷವಾಗಿ ಪರಿಗಣಿಸಿ ರೈತರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಜಿಲ್ಲೆಯಲ್ಲಿ ಸಾವಿರಾರು ರೈತರು ಗೋಮಾಳ, ಹಳ್ಳ, ಅರಣ್ಯ ಮತ್ತಿತರೆ ಹೆಸರಿನಲ್ಲಿರುವ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಜಿಲ್ಲೆಯ ಒಟ್ಟು ಭೂಮಿಯ ಇರುವಂತೆ ವಾಸ್ತವಿಕ ಸರ್ವೆ ಮಾಡಿ, ಅದರಂತೆ ದಾಖಲಾತಿ ಮಾಡಿದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗುವುದಿಲ್ಲ. ಈ ಕುರಿತಂತೆ ಒಟ್ಟು ಭೂಮಿ ಸರ್ವೆಗೆ ಮುಂದಾಗುವಂತೆ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಆರ್. ನವೀನ್‍ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.