ADVERTISEMENT

ವಿನಾಯಕ ಮೂರ್ತಿ ಮೇಲೆ ಚಪ್ಪಲಿ ಇಟ್ಟ ಪ್ರಕರಣ: ಷಡ್ಯಂತ್ರ ಪತ್ತೆ ಹಚ್ಚಲು ಆಗ್ರಹ

ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಹಿಂದುತ್ವ ಪರ ಸಂಘಟನೆಗಳು, ಸಾರ್ವಜನಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:52 IST
Last Updated 22 ಸೆಪ್ಟೆಂಬರ್ 2025, 5:52 IST
ಬೇಲೂರಿನ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್‌.ಕೆ. ಸುರೇಶ್ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ, ಹಿಂದುತ್ವ ಪರ ಸಂಘಟನೆಗಳು, ವಿವಿಧ ಸಂಘಟನೆಗಳ ಪ್ರಮುಖರ ಪಾಲ್ಗೊಂಡಿದ್ದರು.
ಬೇಲೂರಿನ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್‌.ಕೆ. ಸುರೇಶ್ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ, ಹಿಂದುತ್ವ ಪರ ಸಂಘಟನೆಗಳು, ವಿವಿಧ ಸಂಘಟನೆಗಳ ಪ್ರಮುಖರ ಪಾಲ್ಗೊಂಡಿದ್ದರು.   

ಬೇಲೂರು: ಇಲ್ಲಿನ ಪುರಸಭೆ ಆವರಣದ ವರಸಿದ್ಧಿ ವಿನಾಯಕ ಮೂರ್ತಿಯ ಮೇಲೆ ಮಹಿಳೆಯೊಬ್ಬಳು ಎರಡು ಚಪ್ಪಲಿ ಇಟ್ಟಿದ್ದಾಳೆ ಎನ್ನಲಾದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದುತ್ವ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾನುವಾರ ಪಟ್ಟಣದಲ್ಲಿ ನಿರಂತರ ಪ್ರತಿಭಟನೆ ನಡೆಸಿದರು.

ಬೇಲೂರು ಹಾಗೂ ಸುತ್ತಲಿನ ಸಾಕಷ್ಟು ಜನರು ಈ ಗಣಪತಿ ಮೂರ್ತಿಗೆ ನಮಸ್ಕರಿಸಿ ತಮ್ಮ ದಿನಚರಿ ಆರಂಭಿಸುವ ಅಭ್ಯಾಸ ಇಟ್ಟಕೊಂಡಿದ್ದಾರೆ. ಎಂದಿನಂತೆ ಇಬ್ಬರು ಭಕ್ತರು ಭಾನುವಾರ ಮುಂಜಾನೆ 4ಕ್ಕೆ ಗಣಪತಿ ಮೂರ್ತಿಗೆ ನಮಸ್ಕರಿಸಲು ಹೋಗಿದ್ದು, ಮೂರ್ತಿಯ ಮೇಲೆ ಚಪ್ಪಲಿ ಇರುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಚಪ್ಪಲಿ ತೆರವು ಮಾಡಿ, ತನಿಖೆ ಆರಂಭಿಸಿದರು.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವಿವಿಧೆಡೆಗಳಿಂದ ಬಂದ ಹಿಂದುತ್ವ ಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ‘ಪೊಲೀಸರು ತಪ್ಪಿತಸ್ಥರನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಶಾಂತ ರೀತಿಯಿಂದ ವರ್ತಿಸುವಂತೆ’ ಮನವಿ ಮಾಡಿದರು.

ADVERTISEMENT

ಸ್ಥಳಕ್ಕೆ ಬಂದ ಶಾಸಕ ಎಚ್.ಕೆ. ಸುರೇಶ್, ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ ಕುಳಿತರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ‘ಆರೋಪಿಯನ್ನು ಮಧ್ಯಾಹ್ನ 12.30ರೊಳಗೆ ಕಂಡು ಹಿಡಿಯುತ್ತೇವೆ. ಪ್ರತಿಭಟನೆ ನಿಲ್ಲಿಸುವಂತೆ’ ಶಾಸಕರ ಮನವೊಲಿಸಿದರು.

ಆದರೆ ಮಧ್ಯಾಹ್ನ 12.30 ಆದರೂ ಆರೋಪಿಯ ಮಾಹಿತಿ ಸಂಗ್ರಹಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು ಮತ್ತೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದರು.

ಬಜರಂಗದಳದ ಸಕಲೇಶಪುರ ರಘು ಮಾತನಾಡಿ, ‘ವರ್ಷಕ್ಕೊಮ್ಮೆ ಆಚರಿಸುವ ಗಣಪತಿ ಪ್ರತಿಷ್ಠಾಪನೆಯಿಂದ, ವಿಸರ್ಜನೆಯವರೆಗೆ 108 ವಿಘ್ನಗಳನ್ನು ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗಲ್ಲಿಗಳಲ್ಲಿ ಇಡುತ್ತಿದ್ದ ಗಣಪತಿಗಳನ್ನು ಮುಂದಿನ ದಿನಗಳಲ್ಲಿ ಇಡದಂತೆ ನಿಬಂಧನೆ ಹೇರುತ್ತಿದೆ. ಚಪ್ಪಲಿ ಹಾಕಿರುವ ಮಹಿಳೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು’ ಎಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲ್ಲೂಕು ಘಟಕದ ಕಾರ್ಯದರ್ಶಿ ನಾಗೇಶ್ (ಗುಂಡ) ಮಾತನಾಡಿ, ಆರೋಪಿಗೆ ಹುಚ್ಚಿ ಎನ್ನುವ ಪಟ್ಟ ಕಟ್ಟಿ ಪೊಲೀಸರು ನುಣುಚಿಕೊಳ್ಳಲು ಮುಂದಾಗಿದ್ದು, ಯಾರೇ ಆಗಲಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ವೀರಾಂಜನೇಯ ದೇಗುಲ ಸಮಿತಿ ಅಧ್ಯಕ್ಷ ಮೋಹನ್, ವರಸಿದ್ಧಿ ವಿನಾಯಕ ದೇಗುಲ ಸಮಿತಿ ಅಧ್ಯಕ್ಷ ವಿರೂಪಾಕ್ಷ, ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತೀರ್ಥಂಕರ್, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪುರಸಭೆ ಸದಸ್ಯರಾದ ಪ್ರಭಾಕರ್, ಜಗದೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್, ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್, ನಿಸ್ವಾರ್ಥ ಗೆಳೆಯರ ಬಳಗ ಸೇವಾ ಸಮಿತಿ ಅಧ್ಯಕ್ಷ ಹೇಮಂತ್, ಪ್ರಮುಖರಾದ ಮಂಜುನಾಥ್, ಸಂತೋಷ್ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಬೇಲೂರು ಪುರಸಭೆ ಆವರಣದ ಗಣೇಶ ದೇಗುಲದ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಬೇಲೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪೊಲೀಸರು ಆರೋಪಿಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಘಟನೆಯ ಹಿಂದೆ ಯಾರ ಷಡ್ಯಂತ್ರ ಇದೆ ಎಂಬುದು ತಿಳಿದಾಗ ಮಾತ್ರ ನ್ಯಾಯ ಕೊಟ್ಟಂತಾಗುತ್ತದೆ. ಇದು ಬೇಲೂರಿಗೆ ಅಲ್ಲ ದೇಶಕ್ಕೆ ಅಗಿರುವ ಅವಮಾನ.
ಎಚ್.ಕೆ. ಸುರೇಶ್ ಶಾಸಕ

ಬುಲ್ಡೋಜರ್‌ ಚಲಾಯಿಸಿ: ಸಿ.ಟಿ. ರವಿ ‘ತಪ್ಪು ಮಾಡಿರುವವರು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೆ ಪೊಲೀಸರು ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಚಲಾಯಿಸಲಿ. ರಾಜ್ಯ ಹಾಗೂ ದೇಶದ ಜನತೆಗೆ ಸಂದೇಶ ಹೋಗಲಿ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು. ‘ಪದೇ ಪದೇ ಹಿಂದೂಗಳ ಭಾವನೆ ಕೆದಕುವ ಕೆಲಸವಾಗುತ್ತಿದೆ. ಗೋವಿನ ಕೆಚ್ಚಲು ಕತ್ತರಿಸುತ್ತಾರೆ. ಕರುಣೆ ಇಲ್ಲದ ಕಿರಾತಕರು. ನಾವು ಮೈಮರೆತು ಲಘುವಾಗಿ ಪರಿಗಣಿಸಿದರೆ ನಾಳೆ ಮನುಷ್ಯರ ಕುತ್ತಿಗೆಗೆ ಕೈ ಹಾಕುತ್ತಾರೆ. ಇದು ಕೇವಲ ಬೇಲೂರು ಗಣಪತಿ ಅಲ್ಲ ಇಡೀ ಹಿಂದೂ ಸಮಾಜದ ಗಣಪತಿ. ಹೋರಾಟಗಾರರಿಗೆ ಚಿಕ್ಕಮಗಳೂರಿನವರು ಸಹ ಬೆಂಬಲ ನೀಡುತ್ತೇವೆ’ ಎಂದರು.

ದೇಗುಲ ಶುದ್ಧಿ: ಬಿಗಿ ಬಂದೋಬಸ್ತ್‌ ಘಟನೆ ಸಂಬಂಧ ವರಸಿದ್ದಿ ವಿನಾಯಕ ದೇಗುಲ ಸಮಿತಿ ಅಧ್ಯಕ್ಷ ವಿರೂಪಾಕ್ಷ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ದೇಗುಲವನ್ನು ಶುದ್ಧಿಗೊಳಿಸಿ ಆರ್ಚಕ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ದೇಗುಲ ಮಸೀದಿಗಳ ಮುಂದೆ ಪೊಲೀಸ್ ಕಾವಲು ಹಾಕಲಾಗಿತ್ತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ ಪೊಲೀಸ್‌ ಇನ್‌ಸ್ಪೆಕ್ಟರ್ ರೇವಣ್ಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಗದೀಶ್ ನೇತೃತ್ವದಲ್ಲಿ ಸಿಆರ್‌ಪಿ ಡಿಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.