ADVERTISEMENT

13ಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:51 IST
Last Updated 11 ಜನವರಿ 2021, 2:51 IST

ಚನ್ನರಾಯಪಟ್ಟಣ: ‘ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಬುಧವಾರ (ಜ.13) ಬಾಲಗಂಗಾಧರ ನಾಥ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹಾಸನ-ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ಕಬ್ಬಳಿಯ ಬಸವೇಶ್ವರ ದೇಗುಲದಲ್ಲಿ ದೇವರಿಗೆ ಅಭಿಷೇಕ, ರಜತಕವಚ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುವುದು. ಬಾಲಗಂಗಾಧರನಾಥ ಸ್ವಾಮೀಜಿ ಪಾದುಕೆಗಳಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ದೀಪಾರಾಧನೆ ನಂತರ ಮಹಾಮಂಗಳಾರತಿ, ಪೂಜೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

‘ಬೆಳಿಗ್ಗೆ 8.30ರಿಂದ ಸಂಜೆ 6ವರೆಗೆ ಭಜನೆ, ಕೀರ್ತನೆ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ದಿವ್ಯ ಜ್ಯೋತಿ ಮೆರವಣಿಗೆ ಇರುತ್ತದೆ.
ಇದುವರೆಗೆ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಾಸನದ ಆದಿಚುಂಚನಗಿರಿ ಶಾಖಾ ಮಠದಲ್ಲಿ ನೆರವೇರಿಸಲಾಗುತ್ತಿತ್ತು. ಈ ವರ್ಷ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಏರ್ಪಡಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಅದೇ ದಿನ ರಾತ್ರಿ ಕಬ್ಬಳಿಯಲ್ಲಿ ಪ್ರತಿ ವರ್ಷದಂತೆ ಧನುರ್ಮಾಸ ಪೂಜೆ ಇರುತ್ತದೆ. ಹರಕೆ ಹೊತ್ತ ಭಕ್ತರು ಕ್ಷೇತ್ರದಿಂದ ಕಳಸ ತೆಗೆದುಕೊಂಡು ಹೋಗಿ ಆಯಾ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಬಸವ ಮಾಲೆ ಧರಿಸಿ ವ್ರತ ಆಚರಿಸುತ್ತಾರೆ. ಬಸವ ಮಾಲಾಧಾರಿಗಳು ಜ. 13ರಂದು ರಾತ್ರಿ ಬಸವೇಶ್ವರ ಸ್ವಾಮಿ ಸನ್ನಿಧಿಗೆ ಆಗಮಿಸಿ ಬಸವಮಾಲೆ ತೆಗೆಯುತ್ತಾರೆ. ಕೋವಿಡ್-19 ಕಾರಣದಿಂದ ತೆಪ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಇರುವುದಿಲ್ಲ. ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.

ಕಬ್ಬಳಿಯ ಶಿವಪುತ್ರ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.