
ಜಾವಗಲ್: ಗ್ರಾಮ ಸೇರಿದಂತೆ ಹೋಬಳಿಯ ಗ್ರಾಮಗಳ ಬನಶಂಕರಿ ದೇವಾಲಯಗಳಲ್ಲಿ ಶನಿವಾರ ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಜಾವಗಲ್ ಗ್ರಾಮದ ಐತಿಹಾಸಿಕ ಹಾಗೂ ಪುರಾತನ ಬನಶಂಕರಿ ದೇವಸ್ಥಾನದಲ್ಲಿ ನೇಕಾರ ದೇವಾಂಗ ಸಂಘ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಬನದ ಹುಣ್ಣಿಮೆ ಆಚರಿಸಲಾಯಿತು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಮಹಾಗಣಪತಿ ಪೂಜೆ, ಫಲ ಪಂಚಾಮೃತ ಅಭಿಷೇಕ, ವಸ್ತ್ರಾಲಂಕಾರ ಹಾಗೂ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ಬಳಿಕ ಸಂಜೆ 6ರ ನಂತರ ದೇವತಾ ಪ್ರಾರ್ಥನೆಯೊಂದಿಗೆ ದುರ್ಗಾ ಹೋಮ, ಗಣಪತಿ ಪೂಜೆ ಹಾಗೂ ಮಹಾ ಪೂರ್ಣಾಹುತಿ ನೀಡಲಾಯಿತು.
ನಂತರ ಉತ್ಸವ ನೆರವೇರಿಸುವ ಜೊತೆಗೆ ಉಯ್ಯಾಲೋತ್ಸವ ನಡೆಸಿ ಅಮ್ಮನವರಿಗೆ ಮಹಾಮಂಗಳಾರತಿ ಮಾಡಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡುವ ಮೂಲಕ ಬನದ ಹುಣ್ಣಿಮೆ ಕಾರ್ಯಕ್ರಮ ಸಂಪನ್ನಗೊಂಡಿತು.
ಅರ್ಚಕ ಮಂಜುನಾಥ್, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಮನೋಹರ್ ಅವರು ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಬನದ ಹುಣ್ಣಿಮೆ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.