ADVERTISEMENT

ಭೇದವಿಲ್ಲದೇ ಪ್ರತಿಯೊಬ್ಬರೂ ಭಾಗವಹಿಸಿ: ಪುಷ್ಪಗಿರಿ ಸ್ವಾಮೀಜಿ

21ರಂದು ಜಿಲ್ಲೆಗೆ ಬಸವ–ಸಂಸ್ಕೃತಿ ಅಭಿಯಾನ: ಸಭೆಯಲ್ಲಿ ಪುಷ್ಪಗಿರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 1:49 IST
Last Updated 3 ಸೆಪ್ಟೆಂಬರ್ 2025, 1:49 IST
ಹಾಸನದ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹಾಸನದ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಹಾಸನ: ವಿಶ್ವಗುರು ಬಸವಣ್ಣ ಅವರನ್ನು ರಾಜ್ಯ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಪೂರೈಸಿದ ಸವಿನೆನಪಿಗಾಗಿ, ಸೆ. 1ರಿಂದ ಪ್ರಾರಂಭವಾದ ಬಸವ ಸಂಸ್ಕೃತಿ ಅಭಿಯಾನ ಸೆ. 21ರಂದು ಹಾಸನ ನಗರಕ್ಕೆ ಬರಲಿದ್ದು, ಅದರ ಪೂರ್ವಭಾವಿ ಸಭೆ ನಗರದ ತಣ್ಣೀರುಹಳ್ಳ ಮಠದ ಅವರಣದಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ‘ಈ ಅಭಿಯಾನದಲ್ಲಿ ಜಾತಿ, ಧರ್ಮ, ವರ್ಗ ಭೇದವಿಲ್ಲದೇ ಪ್ರತಿಯೊಬ್ಬರೂ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಪ್ರಚಾರ-ಪ್ರಸಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸೆಪ್ಟೆಂಬರ್ 21ರಂದು ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಹಾಸನಕ್ಕೆ ಬರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ವೀರಶೈವ-ಲಿಂಗಾಯತ ಸಮಾಜ ಹಾಗೂ ಬಸವಭಕ್ತರು ಭವ್ಯ ಸ್ವಾಗತ ನೀಡುವಂತೆ ತಿಳಿಸಿದರು.

ADVERTISEMENT

‘ಅಂದು ಬೆಳಿಗ್ಗೆ 11 ಗಂಟೆಗೆ ಕಲಾಭವನದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಸಂವಾದ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಯಿಂದ ಬಸವ ಪುತ್ಥಳಿಯ ಸ್ತಬ್ಧಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಬಳಿಕ ಕಲಾಭವನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ’ ಎಂದರು.

ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ‘ಈ ಹಿಂದೆ ಧಾರವಾಡದಲ್ಲಿ ನಡೆದ ಬಸವ ಮಠಾಧೀಶರ ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು. ಹಾಸನದಲ್ಲಿ ಕಾರ್ಯಕ್ರಮ ನಡೆಸಲು ನಮಗೆ ಸೂಚನೆ ನೀಡಿದ ಬಳಿಕ ಎಲ್ಲ ಮಠಾಧೀಶರಿಗೆ ಮಾಹಿತಿ ನೀಡಿದ್ದು, ಪೂರ್ವಭಾವಿ ಸಭೆಗೆ ಹೆಚ್ಚಿನ ಪ್ರತಿಕ್ರಿಯೆ ದೊರೆತಿದೆ. ಮಠದಿಂದ ಪೂರ್ಣ ಸಹಕಾರ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಹಾಸನ, ಕೊಡಗು ಜಿಲ್ಲೆಯ ಅನೇಕ ಮಠಾಧೀಶರು, ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ, ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಬೇಲೂರು ತಾಲ್ಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಸಂಚಾಲಕರಾದ ಅನಂದ್ ಪಟೇಲ್, ರವಿಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ಬಿ.ಕೆ.ಚಂದ್ರಕಲಾ, ಪದಾಧಿಕಾರಿಗಳಾದ ಗೀತಾ ಶಿವರಾಜ್, ಶರಣ ಸಾಹಿತ್ಯ ಪರಿಷತ್ತಿನ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Highlights - ಕಲಾಭವನದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ, ಸಭಾ ಕಾರ್ಯಕ್ರಮ ನಗರದ ಪ್ರಮುಖ ಬೀದಿಗಳಲ್ಲಿ ಬಸವ ಸ್ತಬ್ಧಚಿತ್ರದ ಮೆರವಣಿಗೆ ವಿವಿಧೆಡೆಯಿಂದ ಸಾವಿರಾರು ಜನರು ಭಾಗಿ: ಅದ್ಧೂರಿ ಕಾರ್ಯಕ್ರಮಕ್ಕೆ ನಿರ್ಧಾರ

Quote - ಅಭಿಯಾನವು ಸಮಸಮಾಜ ವ್ಯಸನಮುಕ್ತ ಸದೃಢ ಸಮಾಜ ಕಟ್ಟುವುದು ಮಕ್ಕಳಲ್ಲಿ ಅಧ್ಯಾತ್ಮಿಕ ಭಾವನೆ ಮೂಡಿಸುವುದು ಮಹಿಳೆಯರ ಘನತೆ ಹೆಚ್ಚಿಸುವ ಗುರಿ ಹೊಂದಿದೆ. ಮಲ್ಲಿಕಾರ್ಜುನ ಸ್ವಾಮೀಜಿ ಅರಕಲಗೂಡು ದೊಡ್ಡಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.