
ಹಿರೀಸಾವೆ: ಅಪ್ಪ, ಅಪ್ಪ ಬಸಪ್ಪ, ಸ್ವಾಮಿ, ಸ್ವಾಮಿ, ಬಸವೇಶ್ವರಸ್ವಾಮಿ ಎಂದು ನಾಮಸ್ಮರಣೆ ಮಾಡುತ್ತ ಸಾವಿರಾರು ಬಸವ ಮಾಲಾಧಾರಿಗಳು ತಮ್ಮ ಗ್ರಾಮ ದೇವತೆಗಳೊಂದಿಗೆ ಹೋಬಳಿಯ ಕಬ್ಬಳಿಯ ಬಸವೇಶ್ವರ ದೇವಸ್ಥಾನಕ್ಕೆ ಬುಧವಾರ ರಾತ್ರಿ ಮೆರವಣಿಗೆಯಲ್ಲಿ ಬಂದು ಧನುರ್ಮಾಸ ವ್ರತವನ್ನು ಸಂಪನ್ನಗೊಳಿಸಿದರು.
ರಾಜ್ಯದ ಮೂಲೆ, ಮೂಲೆಯಿಂದ ಬಂದಿದ್ದ ಭಕ್ತರು, ಗುರುವಾರ ಬೆಳಗಿನ ಜಾವ ದೇವಸ್ಥಾನದ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಗುರುಗಳ ಮಾರ್ಗದರ್ಶನದಲ್ಲಿ ತಾವು ತೊಟ್ಟಿದ್ದ ವಸ್ತ್ರ ಮತ್ತು ಬಸವ ಮಾಲೆಯನ್ನು ತೆಗೆದರು.
ಅಯ್ಯಪ್ಪಸ್ವಾಮಿಗೆ ಮಾಲೆ ಧರಿಸುವ ಮಾದರಿಯಲ್ಲಿಯೇ, ಕಬ್ಬಳಿ ಬಸವೇಶ್ವರ ಸ್ವಾಮಿಗೆ ಸಾವಿರಾರು ಭಕ್ತರು ಧನುರ್ಮಾಸದ ಪ್ರಾರಂಭದಿಂದ ಬಸವಮಾಲೆ ಧರಸಿ ವ್ರತ ಕೈಗೊಂಡಿದ್ದರು. ಈ ಆಚರಣೆಯು 40 ವರ್ಷಗಳಿಂದ ನಡೆಯುತ್ತಿದ್ದೆ. ಗ್ರಾಮದೇವತೆ ಮತ್ತು ದೇವಸ್ಥಾನದಿಂದ ತೆಗೆದುಕೊಂಡು ಹೋಗಿದ್ದ ಕಳಸವನ್ನು ವಿವಿಧ ವಾದ್ಯಗಳು, ಕಲಾತಂಡಗಳ ಮೆರವಣಿಗೆಯಲ್ಲಿ ಬುಧವಾರ ರಾತ್ರಿ ಸಾವಿರಾರು ಮಾಲಾಧಾರಿಗಳು ದೇವಸ್ಥಾನದ ಆವರಣವನ್ನು ಸೇರಿದರು.
ನಿರ್ಮಲಾನಂದನಾಥ ಸ್ವಾಮೀಜಿ ಬಂದ ನಂತರ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಹಾಸನ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು ಇದ್ದರು.
ಚನ್ನರಾಯಪಟ್ಟಣ, ತುರುವೆಕೆರೆ, ತಿಪಟೂರು ಮತ್ತು ಅರಸೀಕೆರೆ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಬ್ಬಳಿ ಗ್ರಾಮಕ್ಕೆ ಕರೆತಂದಿದ್ದರು. ದೇವಸ್ಥಾನದ ಆವರಣದಲ್ಲಿ ಭಕ್ತರು ಭಜನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವಿವಿಧ ತಾಲ್ಲೂಕುಗಳ ಹಲವು ಗ್ರಾಮಗಳಿಂದ ಬಂದಿದ್ದ ಎಲ್ಲ ದೇವರಿಗೆ ಕಬ್ಬಳಿಯ ಬಸವೇಶ್ವರ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಮಡ್ಲಕ್ಕಿ ಗೌರವ ಅರ್ಪಿಸಿ, ದೇವರನ್ನು ಕಳುಹಿಸಿಕೊಡಲಾಯಿತು.
ಸಂಕ್ರಾಂತಿ ಹಬ್ಬದ ದಿವಸ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಬಸವೇಶ್ವರ ದೇವರ ದರ್ಶನ ಪಡೆದರು. ದಿಡಗ ಗ್ರಾಮದಲ್ಲಿನ ಡಾ. ರಾಜಕುಮಾರ್ ವೃತ್ತದಲ್ಲಿ ಭಕ್ತರಿಗೆ ಉಪಾಹಾರ ವಿತರಿಸಲಾಯಿತು. ಬಹುತೇಕ ದೇವರು ಈ ಮಾರ್ಗದಲ್ಲಿ ಕಬ್ಬಳಿಗೆ ಸಾಗಿದವು.
ಧನುರ್ಮಾಸ ಪೂಜೆಗೆ ವಿವಿಧ ಗ್ರಾಮ ದೇವರ ಮೆರವಣಿಗೆ ಉತ್ಸವ ಮೂರ್ತಿಯ ಬದಲು ಬಸವೇಶ್ವರ ಸ್ವಾಮಿ ಚಿತ್ರದ ತೆಪ್ಪೋತ್ಸವ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ
ನಮ್ಮ ಗ್ರಾಮದಲ್ಲಿ 25 ವರ್ಷದಿಂದ ಬಸವ ಮಾಲೆ ಧರಿಸುವ ಪದ್ಧತಿ ಇದೆ. ವ್ರತವನ್ನು ಆಚರಿಸಿ ಕಳಸದ ಮೆರವಣಿಗೆಯಲ್ಲಿ ಇಲ್ಲಿಗೆ ಬಂದಿದ್ದೇವೆ.
–ಹರೀಶ್ ಕನುವನಘಟ್ಟ ಗ್ರಾಮ ಪಂಚಾಯಿತಿ ಸದಸ್ಯ
18 ವರ್ಷದಿಂದ ಮಾಲೆ ಹಾಕುತ್ತಿರುವೆ. ನನಗೆ ಒಳ್ಳೆಯದಾಗಿದೆ. ಭಜನೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಸಂತೋಷ ಇದೆ
– ಪ್ರಸಾದ್ ನೋಣವಿನಕೆರೆ ತಿಪಟೂರು ತಾಲ್ಲೂಕು
ಮೂರ್ತಿ ಬದಲು ಚಿತ್ರದ ತೆಪ್ಪೋತ್ಸವ
ಪ್ರತಿ ವರ್ಷ ನಡೆಯುವ ತೆಪ್ಪೋತ್ಸವದಲ್ಲಿ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಇರುತ್ತಿತ್ತು. ಆದರೆ ಗ್ರಾಮದಲ್ಲಿ ಜಯರಾಮೇಗೌಡ ಎಂಬುವವರು ನಿಧನದ ಸೂತಕದಿಂದ ಉತ್ಸವ ಮೂರ್ತಿ ಮೂಲಸ್ಥಾನಕ್ಕೆ ಕರೆತರಲಿಲ್ಲ. ರಾತ್ರಿ ನಿರ್ಮಲಾನಂದನಾಥ ಸ್ವಾಮೀಜಿಯವರು ಮೂಲ ಮೂರ್ತಿ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಬಸವೇಶ್ವರ ಸ್ವಾಮಿ ಚಿತ್ರ (ಪೋಟೋ) ದಸರಿಘಟ್ಟ ಚೌಡೇಶ್ವರಿ ದೇವಿ ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯರ ತೆಪ್ಪೋತ್ಸವ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.