ADVERTISEMENT

ಹೊಳೆನರಸೀಪುರ ನರ್ಸಿಂಗ್‌ ಕಾಲೇಜಿನಲ್ಲಿ ‘ಗಡ್ಡ’ದ ವಿವಾದ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 0:15 IST
Last Updated 11 ನವೆಂಬರ್ 2024, 0:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೊಳೆನರಸೀಪುರ (ಹಾಸನ): ಜಮ್ಮು-ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಹೊಳೆನರಸೀಪುರ ನರ್ಸಿಂಗ್‌ ಕಾಲೇಜು ಪ್ರಾಂಶುಪಾಲರು ತಾಕೀತು ಮಾಡಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಹಾಕಿದ್ದ ಪೋಸ್ಟ್‌ ಸಂಚಲನ ಸೃಷ್ಟಿಸಿತ್ತು. ನಂತರ ಕಾಲೇಜು ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಮಾತುಕತೆ ನಡೆಸಿ ವಿವಾದ ತಿಳಿಯಾಗಿಸಿದ್ದಾರೆ.

‘ಶೇವಿಂಗ್‌ ಮಾಡಿಕೊಂಡು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಆದರೆ ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಈ ಕ್ರಮ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಆರೋಪಿಸಿ ಇಲ್ಲಿನ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು –ಕಾಶ್ಮೀರದ ವಿದ್ಯಾಥಿಗಳು, ಜಮ್ಮು–ಕಾಶ್ಮೀರ ಸ್ಟುಡೆಂಟ್ಸ್‌ ಅಸೋಸಿಯೇಶನ್‌ಗೆ ಈಚೆಗೆ ಪತ್ರ ಬರೆದಿದ್ದರು.

ADVERTISEMENT

ಈ ಪತ್ರವನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದ ಜಮ್ಮು– ಕಾಶ್ಮೀರ ಸ್ಟುಡೆಂಟ್ಸ್ ಅಸೋಸಿಯೇಷನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್‌ ಅವರನ್ನು ಟ್ಯಾಗ್ ಮಾಡಿತ್ತು. ಈ ಸಂಬಂಧ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಕಚೇರಿಯಿಂದ ಕಾಲೇಜಿಗೆ ಸೂಚನೆ ಬಂದಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜಿನ ಪ್ರಮುಖರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಸಭೆಯ ನಂತರ ಮಾತನಾಡಿದ ವಿದ್ಯಾರ್ಥಿಗಳು, ‘ಕ್ಲೀನ್‌ ಶೇವ್‌ ಅಥವಾ ಟ್ರಿಮ್‌ ಮಾಡುವಂತೆ ಸೂಚನೆ ನೀಡಲಾಗಿತ್ತು. ನಮ್ಮ ಸಂಪ್ರದಾಯ ಮುಂದುವರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದೀಗ ಯಾವುದೇ ವಿವಾದ ಇಲ್ಲ’ ಎಂದು ತಿಳಿಸಿದರು. ಪ್ರಧಾನಮಂತ್ರಿ ವಿಶೇಷ ಸ್ಕಾಲರ್‌ಶಿಪ್‌ (ಪಿ.ಎಂ.ಎಸ್.ಎಸ್)‌ ಯೋಜನೆ ಅಡಿ ಇಲ್ಲಿನ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಜಮ್ಮು –ಕಾಶ್ಮೀರದ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

‘ಸೆ.8 ರಂದು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಕ್ಲಿನಿಕಲ್‌ ಲ್ಯಾಬ್‌ಗೆ ಶೂ ಧರಿಸದೇ ಬಂದಿದ್ದ 18 ವಿದ್ಯಾರ್ಥಿಗಳನ್ನು, ಕ್ಲಿನಿಕಲ್‌ ಲ್ಯಾಬ್‌ನ ಮಾರ್ಗದರ್ಶಕ ವಿಜಯಕುಮಾರ್‌ ಅವರು ಲ್ಯಾಬ್‌ಗೆ ಸೇರಿಸದೇ ಹೊರಗಡೆ ನಿಲ್ಲಿಸಿದ್ದರು. ಈ ವಿಷಯವನ್ನು ಮುಚ್ಚಿಟ್ಟ ಕೆಲವರು, ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸಲು ಸೂಚಿಸಲಾಗಿದೆ ಎಂದು ವಿವಾದ ಸೃಷ್ಟಿಸಿದ್ದರು. ವಿದ್ಯಾರ್ಥಿಗಳ ಸಂಪ್ರದಾಯ ಪಾಲಿಸಲು ನಮ್ಮ ಅಭ್ಯಂತರವಿಲ್ಲ ಎನ್ನುವುದನ್ನು ವಿದ್ಯಾರ್ಥಿಗಳಿಗೂ ತಿಳಿಸಲಾಗಿದೆ. ಕಾಲೇಜಿನ ನಿಯಮದಂತೆ ಶಿಸ್ತಿನಿಂದ ಇರಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ’ ಎಂದು ಪ್ರಾಂಶುಪಾಲ ಚಂದ್ರಶೇಖರ್‌ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.