ADVERTISEMENT

ಹಾಸನ ಜಿಲ್ಲೆಯ ಅಭಿವೃದ್ಧಿಗೆ ಬದ್ಧ: ಸಿ.ಎಂ. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 12:17 IST
Last Updated 11 ಜೂನ್ 2021, 12:17 IST
ಹಾಸನದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು. ಶಾಸಕರಾದ ಪ್ರೀತಂ ಗೌಡ, ಎಚ್‌.ಡಿ.ರೇವಣ್ಣ, ಸಚಿವರಾದ ಡಾ.ಕೆ.ಸುಧಾಕರ್‌, ಕೆ.ಗೋಪಾಲಯ್ಯ ಇದ್ದಾರೆ.
ಹಾಸನದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು. ಶಾಸಕರಾದ ಪ್ರೀತಂ ಗೌಡ, ಎಚ್‌.ಡಿ.ರೇವಣ್ಣ, ಸಚಿವರಾದ ಡಾ.ಕೆ.ಸುಧಾಕರ್‌, ಕೆ.ಗೋಪಾಲಯ್ಯ ಇದ್ದಾರೆ.   

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಪೇಕ್ಷೆಯಂತೆ ಸದ್ಯದಲ್ಲೇ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿಮಾನ ನಿಲ್ದಾಣ ಕಾಮಗಾರಿಗೆ ಹಣಕಾಸಿನ ಸಮಸ್ಯೆ ಇಲ್ಲ‌. ಎರಡು ದಿನದಲ್ಲಿ ದೇವೇಗೌಡರ ಜತೆ ಚರ್ಚಿಸಿ, ಅವರು ಹೇಳಿದವರಿಗೆ ಕಾಮಗಾರಿ ನೀಡಲಾಗುವುದು.ಹಣಕಾಸು ಲಭ್ಯತೆ ನೋಡಿಕೊಂಡು ಶಾಸಕ ಎಚ್‌.ಡಿ.ರೇವಣ್ಣ ಅವರ ಜತೆ ಚರ್ಚಿಸಿಹಂತ, ಹಂತವಾಗಿ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಕೋವಿಡ್‌ನಿಂದ ಕುಂಠಿತಗೊಂಡಿದ್ದು, ಸೋಂಕು ಕಡಿಮೆಯಾದ ಬಳಿಕ ಕೆಲಸ ತ್ವರಿತಗತಿಯಲ್ಲಿ ನಡೆಯಲಿದೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಬಾಕಿ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.

ADVERTISEMENT

ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ನಾಲ್ಕು ತಿಂಗಳಿನಲ್ಲಿ ಆನೆ ದಾಳಿಯಿಂದ ಏಳು ಜನರು ಮೃತಪಟ್ಟಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹಾಸನ, ಕೊಡಗು ಗಡಿ ಭಾಗದಲ್ಲಿಶಾಶ್ವತ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸುವ ಕುರಿತು ಅರಣ್ಯ ಅಧಿಕಾರಿಗಳ ಜತೆ ಚರ್ಚಿಸಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೂರನೇ ಅಲೆ ತಡೆಯುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಪೂರೈಸುವಂತೆ ಬೇಡಿಕೆ ಬಂದಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಖಾಸಗಿ ಶಾಲೆಗಳು ಪ್ರಾರಂಭವಾಗುವ ಮುನ್ನವೇ ಶುಲ್ಕ ಪಡೆಯುವಂತಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲೂ ದೂರುಗಳು ಬಂದಿದ್ದು, ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೊರೊನಾ ಸೋಂಕು ಕಡಿವಾಣಕ್ಕೆ ಸಂಬಂಧಿಸಿದಂತೆ ಸೂಚನೆನೀಡಲಾಗಿದ್ದು, ಕೆಲ ದಿನಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕೆ ಇಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್‌, ಕೆ.ಗೋಪಾಲಯ್ಯ, ಶಾಸಕರಾದ ಎಚ್.ಡಿ.ರೇವಣ್ಣ, ಪ್ರೀತಂ ಜೆ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.