
ಬೇಲೂರು: ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದ ಎದುರಿನಲ್ಲಿರುವ ಮಾಜಿ ಸಚಿವ ಬಿ.ಶಿವರಾಂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಿವೇಶನದ ಅಳತೆಗೆಂದು ಗುರುವಾರ ಜೆಸಿಬಿಯೊಂದಿಗೆ ಬಂದಿದ್ದ ಪುರಸಭೆ ಅಧಿಕಾರಿಗಳು ಮತ್ತು ಪಕ್ಕದ ಮನೆಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಪಕ್ಕದ ನಿವಾಸಿಗರನ್ನು ಸಮಾಧಾನ ಪಡಿಸಿ ಅಳತೆ ಮಾಡಿಸಿದರು. ಆದರೂ ಪಟ್ಟು ಬಿಡದ ಪಕ್ಕದ ಮನೆಯ ಖುರ್ಷಿದಾ ಬೇಗಂ ಮತ್ತು ಕುಟುಂಬ ಸದಸ್ಯರು, ‘ಈ ನಿವೇಶನಗಳು ನಮಗೆ ಸೇರಿದ್ದು. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನೀವು ಬರೀ ಅಳತೆ ಮಾಡಬೇಕೆ ಹೊರತು, ನಮ್ಮ ಸಾಮಾಗ್ರಿಗಳನ್ನೆಲ್ಲ ಏಕೆ ತೆಗೆಯುತಿದ್ದೀರಿ’ ಎಂದು ಪುರಸಭೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುನಃ ಸಿಬ್ಬಂದಿ ಅಳತೆಗೆ ಮುಂದಾಗುತಿದ್ದಂತೆಯೇ ಖುರ್ಷಿದಾ ಬೇಗಂ, ಮತ್ತಿತರರು ಅಳತೆ ವಿರೋಧಿಸಿ ಗಲಾಟೆ ಮಾಡಿದರು. ನಿವೇಶನ ಅಳತೆ ಮಾಡಿಸಲು ಬಂದಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಅಳತೆ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದರೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪುರಸಭೆ ಸಿಬ್ಬಂದಿ ನಿವೇಶನಗಳ ಅಳತೆ ಮಾಡಿ ಗುರುತು ಮಾಡಿದರು. ನಂತರ ಜೆಸಿಬಿಯಿಂದ ನಿವೇಶನದ ಮುಂಭಾಗವಿದ್ದ ಮರ ತೆರವಿಗೆ ಮುಂದಾಗುತ್ತಿದ್ದಂತೆಯೇ ಮತ್ತೆ ಖುಷಿದಾ ಬೇಗಂ ಮತ್ತು ಕುಟುಂಬದವರು ಜೆಸಿಬಿ ಯಂತ್ರದ ಮುಂಭಾಗಕ್ಕೆ ಬಂದು ಮರ ತೆರವುಗೊಳಿಸದಂತೆ ಮಲಗಿದರು.
ಜೊತೆಗಿದ್ದ ಅವರ ಪುತ್ರಿಯೊಬ್ಬರು ನಿತ್ರಾಣಗೊಂಡು ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಸುಮ್ಮನಿರದ ಕುಟುಂಬದವರು ಮರ ತೆರವಿಗೆ ಬಿಡದೇ ಹಟ ಹಿಡಿದಿದ್ದರಿಂದ ಅಧಿಕಾರಿಗಳು ನಿವೇಶನದ ಸಮೀಪದಿಂದ ಹೊರ ಬಂದರು.
ಪುರಸಭೆಯ ಆರ್.ಐ. ಲಕ್ಷ್ಮಣ್, ಸಿಬ್ಬಂದಿ ಜಯರಾಮ್. ಸಲ್ಮಾನ್. ಡಿವೈಎಸ್‍ಪಿ ಗೋಪಿ, ಪಿಎಸ್‍ಐ ಶಿವನಗೌಡ ಜಿ. ಪಾಟೀಲ, ಬೇಲೂರು– ಹಳೇಬೀಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯ್ಯದ್ ತೌಫಿಕ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಸದಸ್ಯರಾದ ಗಿರೀಶ್, ಭರತ್, ಸಿಬ್ಬಂದಿ ಮತ್ತು ಪೊಲೀಸರು ಇದ್ದರು. .
ಈ ಜಾಗ ನಮಗೆ ಸೇರಿದ್ದು. ಬಿ.ಶಿವರಾಂ ಬೆಂಬಲಿಗರು ನಮ್ಮನ್ನು ಹೆದರಿಸಿ ಇಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಮ್ಮನ್ನು ಸಾಯಿಸಿ ಗುಂಡಿಯಲ್ಲಿ ಮುಚ್ಚಿದ ನಂತರ ಅಳತೆ ಮಾಡಲಿ– ಖುರ್ಷಿದಾ ಬೇಗಂ, ಪಕ್ಕದ ಮನೆ ಯಜಮಾನಿ
ಅವರ ಸಂಬಂಧಿಕರು ಬಿ.ಶಿವರಾಂ ಅವರಿಗೆ ಜಾಗ ನೋಂದಣಿ ಮಾಡಿಕೊಟ್ಟಿದ್ದಾರೆ. ನಮಗೆ ನಮ್ಮ ನಿವೇಶನ ಮಾತ್ರ ಸಾಕು. ಬೇರೆಯವರ ಜಾಗ ಬೇಡ. ಜಾಗ ಬಿಡಿಸಿಕೊಡಲು ಬಂದ ಪುರಸಭೆಯವರಿಗೆ ಅಡ್ಡಿಪಡಿಸುತಿದ್ದಾರೆ– ಎಂ.ಜೆ. ನಿಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಅರ್ಜಿಯ ಆಧಾರದಲ್ಲಿ ಕಾನೂನುಬದ್ಧ ಅಳತೆ ಮಾಡುತ್ತಿದ್ದೇವೆ. ದಾಖಲೆಗಳಿದ್ದರೆ ಕೊಡಿ ಎಂದರೂ ದಾಖಲಾತಿ ಕೊಡದೆ ನಮ್ಮ ವಿರುದ್ಧ ಅವಾಚ್ಯವಾಗಿ ನಿಂದಿಸುತ್ತಿದ್ದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ– ಬಸವರಾಜ್ ಕಾಟಪ್ಪ, ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.