ADVERTISEMENT

ಕ್ಷೇತ್ರಕ್ಕೆ ವಿದ್ಯುತ್‌ಗಾಗಿ ₹133 ಕೋಟಿ ಮಂಜೂರು

ಅನುದಾನ ತಂದಿದ್ದು ನಾನೇ: ಎಐಸಿಸಿ ಸದಸ್ಯ ಬಿ. ಶಿವರಾಂ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:52 IST
Last Updated 1 ಫೆಬ್ರುವರಿ 2026, 4:52 IST
ಬಿ.ಶಿವರಾಂ
ಬಿ.ಶಿವರಾಂ   

ಬೇಲೂರು: ‘ನನ್ನ ಪರಿಶ್ರಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಹಕಾರದಿಂದ ಬೇಲೂರು ವಿಧಾನಸಭಾ ಕ್ಷೇತ್ರದ ವಿದ್ಯುತ್ ಕೇಂದ್ರಗಳ ಉನ್ನತೀಕರಣ ಹಾಗೂ ಉಪಕೇಂದ್ರಗಳ ಸ್ಥಾಪನೆಗಾಗಿ, ₹133 ಕೋಟಿ ಅನುದಾನ ತರಲಾಗಿದೆ’ ಎಂದು ಎಐಸಿಸಿ ಸದಸ್ಯ ಬಿ.ಶಿವರಾಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ₹14 ಕೋಟಿ ಅನುದಾನದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಟೆಂಡರ್ ಅಗಿದ್ದು, ಇದರಿಂದ 150 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದರು.

ಅಡಗೂರು ಸುತ್ತಲಿನ ಜನರು ನನ್ನ ಬಳಿ ಮನವಿ ಮಾಡಿದ್ದರಿಂದ ಶಿವಪುರ ಕಾವಲಿನಲ್ಲಿ ವಿದ್ಯುತ್ ಉಪಕೇಂದ್ರ ತೆರೆಯಲು ಕೆಪಿಟಿಸಿಎಲ್ ಎಂಜಿನಿಯರ್ ಜಾಗ ಪರಿಶೀಲನೆ ಮಾಡಿದ್ದಾರೆ. ಕೊಳಗೊಂದ ಕೇಂದ್ರಕ್ಕೆ ಅನುಮೋದನೆ ದೊರೆತಿದೆ. ಬಿಕ್ಕೋಡು ಕೇಂದ್ರದ ಕೆಲಸ ಸದ್ಯದಲ್ಲೇ ಪ್ರಾರಂಭವಾಗಲಿದೆ. ಗೆಂಡೇಹಳ್ಳಿ, ಗಂಗೂರು ಕೇಂದ್ರಕ್ಕೆ ಮರು ಟೆಂಡರ್ ಅಗಿದೆ ಎಂದರು.

ADVERTISEMENT

ಹಗರೆ ಕೇಂದ್ರವು ₹ 9ಕೋಟಿ, ಹಳೇಬೀಡು ಕೇಂದ್ರ ₹13ಕೋಟಿ ಅನುದಾನದಲ್ಲಿ ಉನ್ನತೀಕರಣ ಆಗುತ್ತಿವೆ. ಟೆಂಡರ್ ಆದರೂ ಯಾವ ಗುತ್ತಿಗೆದಾರರು ಈ ಭಾಗಕ್ಕೆ ಕೆಲಸಕ್ಕೆ ಬರಲು ಭಯಪಡುತ್ತಾರೆ ಇದರಿಂದ ಕೆಲಸ ಪ್ರಾರಂಭವಾಗದೇ ಮರು ಟೆಂಡರ್ ಆಗುತ್ತಿವೆ. ಗುತ್ತಿಗೆದಾರ ಕೆಲಸ ಮಾಡಲು ಜನಪ್ರತಿನಿಧಿಗಳು ಹಾಗೂ ರೈತರು ಸಹಕಾರ ನೀಡಬೇಕಿದೆ ಎಂದರು.

ಕೆಡಿಪಿ ಸದಸ್ಯರಾದ ಬಿಕ್ಕೋಡು ಚೇತನ್, ನವೀನ್, ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್, ಕಿಸಾನ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್, ಮುಖಂಡ ನಾಗೇಶ್ ಇದ್ದರು.

ಇವರು ಗುತ್ತಿಗೆದಾರರು...

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಎಚ್.ಕೆ.ಸುರೇಶ್ ಗುತ್ತಿಗೆದಾರರಾಗಿದ್ದು ಕಾಂಟ್ರಾಕ್ಟ್ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಿ.ಶಿವರಾಂ ಹೇಳಿದರು. ಬೇಲೂರಿನ ಶಾಸಕರು ಅಧಿಕಾರಿಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಸಮಗ್ರ ಅಭಿವೃದ್ದಿ ಎಂದು ಭಾಷಣ ಮಾಡುತ್ತಾರೆ. ಕೇವಲ ರಸ್ತೆಗಳ ಮೇಲೆ ಅವರಿಗೆ ಪ್ರೀತಿ. ಗುತ್ತಿಗೆದಾರರಿಗೆ ಹಾಗೂ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡಲು ಅಷ್ಟೇ. ನಾನು ಹೇಳಿದವರಿಗೆ ಕೆಲಸ ಕೊಡಬೇಕು ಎನ್ನುತ್ತಾರೆ. ಹಾಗೆ ಬಿಟ್ಟರೆ ಶೇ 15ರಿಂದ ಶೇ 20 ರಷ್ಟು ಕಡಿಮೆಗೆ ಹೋಗುತ್ತದೆ. ಅದನ್ನು ಮಾಡುವುದಿಲ್ಲ. ಸರ್ಕಾರ ಇವರಿಗೂ ₹25ಕೋಟಿ ಅನುದಾನ ನೀಡಿದೆ. ತಾರತಮ್ಯ ಮಾಡಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.