ಹಾಸನ: ಬಿಎಸ್ಎನ್ಎಲ್ ನೆಟ್‌ವರ್ಕ್ ಜಿಲ್ಲೆಯಲ್ಲಿ ತೀರಾ ಹದಗೆಟ್ಟು ಹೋಗಿದ್ದು, ಗ್ರಾಹಕರು ನಿತ್ಯ ಹಿಡಿಶಾಪ ಹಾಕುವಂತಾಗಿದೆ. ಬೇರೆ ಕಂಪನಿಗಳಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿರುವ ಗ್ರಾಹಕರು ಪರಿತಪಿಸುವಂತಾಗಿದೆ.
‘ಬಿಎಸ್ಎನ್ಎಲ್ ಗ್ರಾಹಕರ ಮೊಬೈಲ್ ಫೋನ್ ಸಂಖ್ಯೆಗೆ ಬೇರೆ ನೆಟ್‌ವರ್ಕ್‌ನಿಂದ ಅಥವಾ ಬಿಎಸ್‌ಎನ್‌ಎಲ್‌ನಿಂದ ಕರೆ ಮಾಡಿದರೆ, ‘ನೀವು ಕರೆ ಮಾಡಿರುವ ಗ್ರಾಹಕರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಅಥವಾ ‘ನೀವು ಕರೆ ಮಾಡಿರುವ ಗ್ರಾಹಕರು ಸದ್ಯಕ್ಕೆ ಉತ್ತರಿಸುತ್ತಿಲ್ಲ’ ಎಂಬ ಉತ್ತರ ಕೇಳುತ್ತಲೇ ಇರುತ್ತದೆ. ಇದರಿಂದಾಗಿ ಗ್ರಾಹಕರು ಬೇಕಂತಲೇ ಕಾಲ್ ಡೈವರ್ಟ್ ಅಥವಾ ನಮ್ಮ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ ಎನ್ನುವ ಅನುಮಾನ ಮೂಡುವಂತಾಗಿದೆ’ ಎಂದು ಗೃಹಿಣಿ ಸುನಂದಾ ಅಸಮಾಧಾನ ಹೊರಹಾಕಿದ್ದಾರೆ.
ಕಡಿಮೆ ದರದ ಆಫರ್: ‘ಕೈಗೆಟುಕುವ ವಾಯ್ಸ್ ಕಾಲಿಂಗ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಬಳಕೆದಾರರು ಅನ್‌ಲಿಮಿಟೆಡ್ ಕರೆಗಳಿಗಾಗಿ ಬಿಎಸ್‌ಎನ್‌ಎಲ್ ಸಿಮ್ ಬಳಸಬಹುದು. ಡೇಟಾ ಸೇವೆಗಳಿಗಾಗಿ ಇತರ ಸಿಮ್ ಬಳಸಬಹುದಾಗಿದೆ ಎಂದು ಬಿಎಸ್‌ಎನ್‌ಎಲ್‌ನವರು ಜನರನ್ನು ಆಕರ್ಷಿಸುತ್ತಾರೆ. ಅದರೆ ಖಾಸಗಿ ಕಂಪನಿಯ ಸಿಮ್, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆದ ಕೂಡಲೇ ಸಮಸ್ಯೆಗಳು ಶುರುವಾಗುತ್ತವೆ. 4ಜಿ ನೆಟ್‌ವರ್ಕ್ ಆಫರ್ ಇದ್ದರೂ, 2ಜಿ ಗುಣಮಟ್ಟದ ಇಂಟರ್‌ನೆಟ್ ಸೌಲಭ್ಯ ಕೂಡ ಸಿಗದು. ಅಷ್ಟರ ಮಟ್ಟಿಗೆ ಕಳಪೆ ಸೇವೆ ಒದಗಿಸುತ್ತದೆ ಬಿಎಸ್‌ಎನ್‌ಎಲ್ ಕಂಪನಿ’ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ನಟರಾಜ್.
ಗ್ರಾಮೀಣ ಭಾಗದಲ್ಲಂತೂ ಬಿಎಸ್ಎನ್ಎಲ್ ನೆಟ್‌ವರ್ಕ್ ಸೇವೆ ಹೇಳುತ್ತಿರದಾಗಿದೆ. ಕರೆ ಮಾಡಬೇಕಾದರೆ, ಎತ್ತರದ ಸ್ಥಳದಲ್ಲಿ ಅಥವಾ ಮರಗಳನ್ನು ಹತ್ತಿ ಮೊಬೈಲ್ ಫೋನ್ ಸಂಪರ್ಕ ಸಾಧಿಸಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಬಿಎಸ್ಎನ್‌ಎಲ್ ಗ್ರಾಹಕರ ಕೇಂದ್ರಗಳಿಗೆ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಜಿಲ್ಲೆಯಲ್ಲಿನ ಬಿಎಸ್ಎನ್ಎಲ್ ಅಸಮರ್ಪಕ ಸೇವೆಯ ಬಗ್ಗೆ ಸಂಸದ ಶ್ರೇಯಸ್ ಪಟೇಲ್ ಕೂಡ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಟವರ್ ಹಾಗೂ ನಗರ, ಪಟ್ಟಣಗಳಲ್ಲಿ ಬಿಎಸ್ಎನ್ಎಲ್ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೇಂದ್ರ ಕಚೇರಿ ಬಹುತೇಕ ಬಂದ್: ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಕಡಿಮೆಯಾದಂತೆ ಜಿಲ್ಲೆಯ ಬಿಎಸ್ಎನ್ಎಲ್ ಕೇಂದ್ರ ಕಚೇರಿ ಬಹುತೇಕ ಬಂದ್ ಆಗಿದ್ದು, ಬಿ ಎಂ ರಸ್ತೆಯಲ್ಲಿರುವ ವಿಶಾಸ ಕಟ್ಟಡದಲ್ಲಿ ಕೇವಲ ಒಂದೆರಡು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ.
ಜಿಲ್ಲೆಯ ಪ್ರಮುಖ ಬಿಎಸ್ಎನ್ಎಲ್ ಕೇಂದ್ರದಲ್ಲಿ ನೂರಾರು ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಖಾಸಗಿ ನೆಟ್‌ವರ್ಕ್‌ಗಳ ಪೈಪೋಟಿ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ.
ಬಿಎಸ್ಎನ್ಎಲ್ ಟವರ್ ಸಮಸ್ಯೆ ಹಾಳಾದ ಬ್ಯಾಟರಿ ಯುಪಿಎಸ್ ಮತ್ತಿತರ ಕಾರಣಗಳಿಂದ ಜನರಿಗೆ ತಡೆರಹಿತ ಸೇವೆ ಲಭಿಸುತ್ತಿಲ್ಲ. ಈ ಸಮಸ್ಯೆಗಳಿಗೆ ನಿವಾರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ.–ಶ್ರೇಯಸ್ ಪಟೇಲ್, ಸಂಸದ
ಹೊಸ ಟವರ್ ಅಳವಡಿಕೆ
‘4 ಜಿ ಸೇವೆ ಒದಗಿಸಲು ತೇಜಸ್ ಮತ್ತು ಸಿ-ಡಾಟ್ ಎಂಬ ದೇಶಿಯ ಟವರ್‌ಗಳನ್ನು ಅಳವಡಿಕೆ ಮಾಡಿದ್ದು ನೆಟ್‌ವರ್ಕ್ ಅಪ್ ಗ್ರೇಡ್ ಮಾಡಲಾಗುತ್ತಿದೆ. ಹಾಗಾಗಿ 4ಜಿ ಸೇವೆ ವ್ಯಾಪಕವಾಗಿ ಒದಗಿಸಲು ಸಾಧ್ಯವಾಗಿಲ್ಲ. ಕೆಲವು ಮೊಬೈಲ್ ಹ್ಯಾಂಡ್ ಸೆಟ್‌ಗಳಿಗೂ 4ಜಿ ಇಂಟರ್‌ನೆಟ್ ಸೌಲಭ್ಯ ದೊರೆಯುತ್ತಿಲ್ಲ. ಕರೆ ಮಾಡಲು ಸ್ವೀಕರಿಸಲು ಮತ್ತು ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ’ ಎಂದು ಬಿಎಸ್‌ಎನ್‌ಎಲ್‌ನ ಎಜಿಎಂ ಪ್ರವೀಣ್ ತಿಳಿಸಿದ್ದಾರೆ.
‘ಕಾಲಕಾಲಕ್ಕೆ ನಿರ್ದಿಷ್ಟ ಟವರ್ ವ್ಯಾಪ್ತಿಯ ಗ್ರಾಹಕರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ ಟವರ್ ಸಮಸ್ಯೆ ಬಗೆಹರಿಸುವ ಕುರಿತು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಗ್ರಾಹಕರು ತಮ್ಮ ಹ್ಯಾಂಡ್‌ಸೆಟ್‌ನಲ್ಲಿ 5ಜಿ/4ಜಿ ಇದ್ದರೆ ಅವರು ನೆಟ್‌ವರ್ಕ್ ಅಪ್‌ಗ್ರೇಡ್ ಆಗುವವರೆಗೆ 3ಜಿ/2ಜಿ ಸೇವೆ ಆಯ್ಕೆ ಮಾಡಿದರೆ ನೆಟ್ ವರ್ಕ್ ಸಮಸ್ಯೆ ಆದಷ್ಟು ಕಡಿಮೆ ಆಗಲಿದೆ. ಹೊಸ 4ಜಿ ಸೇವೆ ಟವರ್ ದೇಶಿಯ ಆಗಿರುವ ಕಾರಣ ಮತ್ತು ಕಳೆದ ಕೆಲ ತಿಂಗಳಿಂದ ಎಲ್ಲ ಕಡೆ ಅಳವಡಿಕೆ ಮಾಡುತ್ತಿರುವುದರಿಂದ ಸೇವೆಯಲ್ಲಿ ನೂನ್ಯತೆ ಕಂಡುಬಂದಿದೆ. 2ಜಿ/3ಜಿ ಸೇವೆಯಲ್ಲಿ ಯಾವುದೇ ತೊಂದರೆ ಅಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಮುಂದಿನ ಕೆಲವೇ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಈಗಾಗಲೇ ಕೇಂದ್ರ ಸರ್ಕಾರ ಹೊಸದಾಗಿ 4ಜಿ ನೆಟ್‌ವರ್ಕ್ ವಿಸ್ತರಣೆಗಾಗಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ ₹6 ಸಾವಿರ ಕೋಟಿ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ದೇಶಾದ್ಯಂತ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ನೆಟ್‌ವರ್ಕ್ ಕವರೇಜ್ ಹೆಚ್ಚಿಸಲು ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಪ್ಯಾಕೇಜ್‌ನಡಿ 1 ಲಕ್ಷ ಟವರ್‌ಗಳನ್ನು ಅಳವಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.