ADVERTISEMENT

ರೈತರನ್ನು ಬೀದಿಯಲ್ಲಿ ಮಲಗಿಸಿದ ಕೇಂದ್ರ ಸರ್ಕಾರ: ಶಾಸಕ ಶಿವಲಿಂಗೇಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 13:45 IST
Last Updated 10 ಮಾರ್ಚ್ 2024, 13:45 IST
<div class="paragraphs"><p>ಕೆ.ಎಂ. ಶಿವಲಿಂಗೇಗೌಡ, ಶಾಸಕ</p></div>

ಕೆ.ಎಂ. ಶಿವಲಿಂಗೇಗೌಡ, ಶಾಸಕ

   

ಹಾಸನ: ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ರೈತರ ನೆರವಿಗೆ ಬರಬೇಕು. ಇಲ್ಲವಾದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ 97,961 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಅದರಲ್ಲಿ 31,33,381 ಕ್ವಿಂಟಲ್ ತೆಂಗು ಇಳುವರಿ ಇದ್ದು, 3.62 ಲಕ್ಷ ಕ್ವಿಂಟಲ್ ಕೊಬ್ಬರಿ ಬರುತ್ತದೆ. ಇದರಲ್ಲಿ 2.20 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿ ಮಾಡಲಾಗಿದ್ದು, 1.42 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಯಾಗದೇ ಉಳಿದಿದೆ. ಕೇಂದ್ರ ಸರ್ಕಾರ ಇಷ್ಟಕ್ಕೆ ಖರೀದಿ ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು.

ADVERTISEMENT

ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ರೈತರ ಸಂಚಿತ ನಿಧಿಯಿಂದ ಬೆಂಬಲ ಬೆಲೆ ನೀಡಬಹುದಾಗಿದ್ದು, ರೈತರ ಸಂಕಷ್ಟವನ್ನು ಕೇಂದ್ರ ಸರ್ಕಾರ ಪರಿಹರಿಸಬಹುದಾಗಿದೆ. ಆದರೆ ಆ ರೀತಿ ಮಾಡದೇ ಮಧ್ಯರಾತ್ರಿ ಖರೀದಿ ಕೇಂದ್ರದ ಎದುರು ಸಾವಿರಾರು ರೈತರು ಮಲಗುವಂತೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರೈತರನ್ನು ಬೀದಿಯಲ್ಲಿ ಮಲಗುವ ಹಾಗೆ ಕೇಂದ್ರ ಸರ್ಕಾರ ಮಾಡಿದ್ದು, ಬೆಂಬಲ ಬೆಲೆ ಯಾರಪ್ಪನ ಮನೆಯದಲ್ಲ. ರೈತರನ್ನು ಇಂತಹ ಸ್ಥಿತಿಗೆ ತಂದಿದ್ದು, ನಾಲ್ಕು ದಿನ ಸರದಿಯಲ್ಲಿ ನಿಂತು ರೈತರು ತತ್ತರಿಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆ ನಿಗದಿ ಮಾಡುವ ಯೋಗ್ಯತೆ ಇಲ್ಲ. ಜಿಲ್ಲೆಯ ಸಂಸದರು ರಾಜ್ಯ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಬಳಿ ಹೋಗಿ ಈ ಬಗ್ಗೆ ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದರು.

ಉಳಿದಿರುವ ಕೊಬ್ಬರಿಯನ್ನು ಖರೀದಿ ಮಾಡುವವರೆಗೂ ಮೇಲೆ ಏಳುವುದಿಲ್ಲ ಎಂದು ಇಲ್ಲಿನ ಲೋಕಸಭಾ ಸದಸ್ಯರು ಒತ್ತಾಯ ಹಾಕಬೇಕು. ಈಗ ಹೊಂದಾಣಿಕೆ ಪಕ್ಷ ಅಲ್ಲವೇ? ಅಲ್ಲಿ ಹೋಗಿ ಮನವಿ ಮಾಡಲಿ. ಅದನ್ನು ಬಿಟ್ಟು ಸರದಿಯಲ್ಲಿ ನಿಂತವರಿಗೆ ಸಾಂತ್ವನ ಹೇಳುವುದಲ್ಲ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.