ADVERTISEMENT

ಎಸಿ ನಾಗರಾಜ್‌ಗೆ ವರ್ಗಾವಣೆ ಭಾಗ್ಯ

ಎಚ್‌ಆರ್‌ಪಿ ಮಂಜೂರಾತಿ ತನಿಖೆ ವರದಿ ಪರಿಣಾಮ, ನೂತನ ಉಪವಿಭಾಗಾಧಿಕಾರಿ ನವೀನ್‌ ಭಟ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 20:26 IST
Last Updated 16 ಅಕ್ಟೋಬರ್ 2019, 20:26 IST
ವೈ. ನವೀನ್‌ ಭಟ್‌
ವೈ. ನವೀನ್‌ ಭಟ್‌   

ಹಾಸನ: ಜಿಲ್ಲೆಯ ವಿವಿಧ ಇಲಾಖೆಗಳ ಆಯಕಟ್ಟಿನ ಸ್ಥಳಗಳಲ್ಲಿರುವ ಅಧಿಕಾರಿಗಳನ್ನು ಒಬ್ಬೊಬ್ಬರಾಗಿ ಎತ್ತಂಗಡಿ ಮಾಡುತ್ತಿರುವ ಬಿಜೆಪಿ ಸರ್ಕಾರ, ಈಗ ಹಾಸನ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರನ್ನು ದಿಢೀರ್‌ ವರ್ಗಾವಣೆ ಮಾಡಿದೆ.

ಎಚ್‌ಆರ್‌ಪಿ ತನಿಖಾ ವರದಿ ಸಲ್ಲಿಸಿರುವುದೇ ನಾಗರಾಜ್‌ ಅವರ ವರ್ಗಾವಣೆಗೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಹೇಮಾವತಿ ಜಲಾಶಯ ಯೋಜನೆಯ (ಎಚ್‍ಆರ್‌ಪಿ) ಮುಳುಗಡೆ ಸಂತ್ರಸ್ತರಿಗೆ ಮೀಸಲಿರಿಸಿದ್ದ ಭೂ ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ತನಿಖಾ ಸಮಿತಿ ಅಧ್ಯಕ್ಷರಾಗಿ ನಾಗರಾಜ್ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಅಕ್ರಮ ಮಂಜೂರಾತಿ ರದ್ದುಪಡಿಸುವಂತೆ ಶಿಫಾರಸು ಮಾಡಿದ್ದರು.

ADVERTISEMENT

ಮೂರು ತಿಂಗಳಿನಿಂದ ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಸನಾಂಬ ದೇವಾಲಯದ ಅಡಳಿತಾಧಿಕಾರಿಯೂ ಆಗಿದ್ದ ನಾಗರಾಜ್, ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದರು. ಕಳೆದ ಎರಡು ಬಾರಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಸ್ಥಳ ನಿರೀಕ್ಷೆಯಲ್ಲಿದ್ದ 2017ನೇ ಸಾಲಿನ ಐಎಎಸ್‌ ಅಧಿಕಾರಿ ವೈ.ನವೀನ್‌ ಭಟ್‌ ಅವರು ಹಾಸನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಹಾಸನಾಂಬ ಮಹೋತ್ಸವ ಅಂಗವಾಗಿ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿಯಾಗಿ ಹಾಗೂ ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅ.30ರವರೆಗೆ ನಾಗರಾಜ್‌ ಅವರನ್ನು ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.

2016ರ ಜೂನ್‌ 27ರಂದು ಹಾಸನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಾಗರಾಜ್‌ ಅವರು ಕಂದಾಯ ಅದಾಲತ್‌ ನಡೆಸಿ ಮೂವತ್ತು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನುವಿಲೇವಾರಿ ಮಾಡಿದ್ದರು. ಇಲಾಖೆ ಕೆಲಸದ ಜೊತೆಗೆ ಹತ್ತಾರು ಕೆರೆಗಳು, ಕಲ್ಯಾಣಿಗಳ ಪುನರುಜ್ಜೀವನಗೊಳಿಸುವುದರ ಜತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದ್ದರು.

ಹಸಿರು ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸರ್ಕಾರ ಮತ್ತು ಜನ ಸಹಭಾಗಿತ್ವಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿ ಸಾಮುದಾಯಿಕ ಕೆಲಸಗಳ ನೇತೃತ್ವ ವಹಿಸಿ ಪ್ರೇರಕ ಶಕ್ತಿಯಾಗಿದ್ದರು. ಹಲವಾರು ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು, ಫಲಿತಾಂಶ ಸುಧಾರಣೆಗೂ ಶ್ರಮಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.

‘ನಾಗರಾಜ್ ಅವರು ಪ್ರಾಮಾಣಿಕ ಅಧಿಕಾರಿ. ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದ ಅವರನ್ನು ದಿಢೀರ್‌ ವರ್ಗಾವಣೆ ಮಾಡಿರುವುದರ ಹಿಂದೆ ಹೇಮಾವತಿ ಯೋಜನೆ ಅಕ್ರಮ ಭೂ ಮಂಜೂರಾತಿಯ ಮಾಫಿಯಾದ ಕೈವಾಡವಿದೆ. ಜೊತೆಗೆ ಹಾಸನಾಂಬ ಜಾತ್ರಾ ಮಹೋತ್ಸವದ ಉತ್ತುವಾರಿ ನೋಡಿಕೊಳ್ಳುತ್ತಿದ್ದ ಅವರನ್ನು ವರ್ಗಾವಣೆ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿರುವ ಶಾಸಕ ಎಚ್‌.ಡಿ. ರೇವಣ್ಣ, ವರ್ಗಾವಣೆ ರದ್ದುಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ನಾಗರಾಜ್‌ ಅವರನ್ನು ಅಧಿಕಾರಿಯಾಗಿ ದೇವಸ್ಥಾನದ ಕೆಲಸಕ್ಕಷ್ಟೇ ದುಡಿಸಿಕೊಂಡು ಕಳುಹಿಸುವುದು ಮಾನವೀಯ ಲಕ್ಷಣವಲ್ಲ. ಜಿಲ್ಲೆಯ ಹಿತದೃಷ್ಟಿಯಿಂದ ವರ್ಗಾವಣೆ ಆದೇಶ ರದ್ದಗೊಳಿಸಿ, ನಾಗರಾಜ್ ಅವರನ್ನ ಇನ್ನೇರಡು ವರ್ಷ ಉಪವಿಭಾಗಾಧಿಕಾರಿಯಾಗಿ ಮುಂದುವರೆಸಬೇಕು’ ಎಂದು ಹಸಿರು ಭೂಮಿ ಪ್ರತಿಷ್ಠಾಧನದ ಅಧ್ಯಕ್ಷ ಟಿ.ಎಚ್‌.ಅಪ್ಪಾಜಿಗೌಡ ಮತ್ತು ಕಾರ್ಯದರ್ಶಿ ಟಿ.ಎಂ.ಶಿವಶಂಕರಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.