ಚನ್ನರಾಯಪಟ್ಟಣ: ‘ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಜೂನ್ 27 ರಿಂದ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಶ್ರೀನಿವಾಸಪುರದಲ್ಲಿರುವ ಕಾರ್ಖಾನೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಏಪ್ರಿಲ್‍ನಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದರಿಂದ ಕಬ್ಬು ಫಸಲು ಚೆನ್ನಾಗಿದೆ. ಉತ್ತರ ಕರ್ನಾಟಕ, ಪಕ್ಕದ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಕಬ್ಬುಕಟಾವಿಗೆ ಕಾರ್ಮಿಕರನ್ನು ಕರೆಸಲಾಗುವುದು. 360 ಕಟಾವು ಗುಂಪುಗಳನ್ನು ಕರೆಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ₹3.30 ಕೋಟಿ ಮುಂಗಡ ನೀಡಲಾಗಿದೆ. ಎಂದು ತಿಳಿಸಿದರು.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಿಂದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಹಣ ₹53 ಕೋಟಿ ಪಾವತಿಯಾಗಿದೆ. ಇನ್ನು ₹18 ಕೋಟಿ ಬಾಕಿ ಇದೆ. ಬಾಕಿ ವಸೂಲಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರು ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ಎಕರೆಗೆ ₹5 ಸಾವಿರ ಸಹಾಯಧನ ನೀಡಲಾಗುವುದು. ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಕಾರ್ಖಾನೆಯ ಕ್ಷೇತ್ರಾಧಿಕಾರಿಗಳು ಉತ್ತಮವಾಗಿ ಕೆಲಸಮಾಡಬೇಕು ಎಂದರು .
ಕಬ್ಬು ಅಭಿವೃದ್ಧಿ ಅಧಿಕಾರಿ ದೇವೇಗೌಡ ಮಾತನಾಡಿದರು. ಕಾರ್ಖಾನೆಯ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಸಿ.ಸಿ. ರವೀಶ್, ಮುತ್ತಿಗೆರಾಜೇಗೌಡ, ನಾರಾಯಣಗೌಡ, ಶಿವಣ್ಣ, ಯೋಗಣ್ಣ, ನಾರಾಯಣ್, ಜಯರಾಂ, ರವಿ, ಲಕ್ಷ್ಮೀ, ಭಾರತಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಘಟಕದ ಪ್ರಧಾನ ವ್ಯವಸ್ಥಾಪಕ ಪೂರ್ಣಸ್ವಾಮಿ ಭಾಗವಹಿಸಿದ್ದರು.
‘5 ಲಕ್ಷ ಟನ್ ಅರೆಯುವ ಗುರಿ’
ಕಳೆದ ವರ್ಷ 4.13 ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಈಬಾರಿ 5 ಲಕ್ಷ ಟನ್ ಕಬ್ಬು ಅರೆಯುವ ಗುರಿಹೊಂದಲಾಗಿದೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಅಂದಾಜು 4 ಲಕ್ಷ ಟನ್ ಕಬ್ಬು ಲಭ್ಯ ಇದೆ. 80 ಸಾವಿರ ಟನ್ ಕಬ್ಬು ಪಕ್ಕದ ಜಿಲ್ಲೆಗಳಿಂದ ತರಿಸಿಕೊಂಡು ಅರೆಯಲಾಗುವುದು. ಎಂದರು. ಒಂದು ಟನ್ ಕಬ್ಬಿಗೆ ₹3291 ನಿಗದಿಪಡಿಸಲಾಗಿದೆ. ಕಬ್ಬು ಪೂರೈಸಿದ 30 ದಿನದೊಳಗೆ ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲಾಗುವುದು. ಬೆಳೆಗಾರರಿಗೆ ಕಳೆದ ಸಾಲಿನ ಹಣವನ್ನು ಪೂರ್ಣ ಪಾವತಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
‘ ₹5 ಸಾವಿರ ನಿಗದಿಪಡಿಸಿ’
ರಾಜ್ಯ ರೈತಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ ಕೇಂದ್ರ ಸರ್ಕಾರ ಒಂದು ಟನ್ ಕಬ್ಬಿಗೆ ₹5 ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಕಬ್ಬು ಬೆಳೆಗಾರರ ನೆರವಿಗೆ ಧಾವಿಸಬೇಕು. ಕಾರ್ಖಾನೆಗೆ ಕಬ್ಬು ಪೂರೈಸಿದ ಕಬ್ಬು ಬೆಳೆಗಾರರಿಗೆ 20 ದಿನದಲ್ಲಿ ಹಣ ಪಾವತಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.