ಚನ್ನರಾಯಪಟ್ಣ: ‘ಸಹಕಾರಿ ಸಂಘಗಳು ಪ್ರಗತಿ ಸಾಧಿಸಿದರೆ ಅದರಿಂದ ಜನರಿಗೆ ಅನುಕೂಲ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ಸಹಕಾರಿ ಕ್ಷೇತ್ರ ಸ್ವಂತ ಬಂಡವಾಳ ಕ್ರೋಢೀಕರಿಸಿಕೊಳ್ಳುವುದರಿಂದ ಸಹಕಾರಿ ರಂಗ ಉನ್ನತಿ ಸಾಧಿಸುತ್ತದೆ. ಕಲ್ಪವೃಕ್ಷ ತೆಂಗು, ಕಾಮಧೇನು ಎನ್ನಿಸಿಕೊಂಡ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜನ ಇದೆ’ ಎಂದರು.
ಟಿಎಪಿಸಿಎಂಎಸ್ ಪ್ರಗತಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ₹40 ಲಕ್ಷ ನೆರವನ್ನು ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಒದಗಿಸಿದ್ದಾರೆ. ಟಿಎಪಿಸಿಎಂಎಸ್ ಕಚೇರಿಯನ್ನು ನವೀಕರಣ ಮಾಡಲಾಗಿದೆ. ಆವರಣದಲ್ಲಿ ಶುದ್ಧ ಕುಡಿಯುವ ನೀರು ಘಟಕದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕಾಂಕ್ರೀಟ್ ಅಳವಡಿಸಲಾಗುವುದು’ ಎಂದು ಹೇಳಿದರು.
‘ಹಾಸನ-ಸೊಲ್ಲಾಪುರ ರೈಲನ್ನು ಚನ್ನರಾಯಪಟ್ಟಣದಲ್ಲಿ ನಿಲುಗಡೆ ಮಾಡಬೇಕು ಎಂಬ ಮನವಿಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ನಿಲುಗಡೆಯ ದಿನಾಂಕವನ್ನು ಸದ್ಯದಲ್ಲಿ ಘೋಷಿಸಲಿದೆ. ಇದಕ್ಕೆ ಸಹಕರಿಸಿದ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು’ ಎಂದು ಹೇಳಿದರು.
ಟಿಎಪಿಸಿಸಿಎಂಸ್ ಅಧ್ಯಕ್ಷ ಎಂ.ಆರ್. ಅನಿಲ್ ಕುಮಾರ್ ಮಾತನಾಡಿ, ‘ಸಂಘದಿಂದ ಬ್ಯಾಂಕಿನಲ್ಲಿ ₹50 ಲಕ್ಷ ನಿಶ್ಚಿತ ಠೇವಣಿ ಇಡಲಾಗಿದೆ. ಸಹಕಾರ ಸಂಘಗಳ ಪ್ರಗತಿಗೆ ಕೈ ಜೋಡಿಸಬೇಕು’ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಯೋಗೀಶ್, ನಿರ್ದೇಶಕರಾದ ಕೆ.ಎಂ. ರಮೇಶ್, ಎನ್.ಕೃಷ್ಣೇಗೌಡ, ಬಿ.ಎಚ್. ಶಿವಣ್ಣ, ವಿ.ಎನ್. ರಾಜಣ್ಣ, ಸಿ.ಜಿ. ಜಗದೀಶ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಎನ್. ವೆಂಕಟೇಶ್, ಪುರಸಭಾದ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ರೇಖಾ, ಲಕ್ಷ್ಮಿ, ಸುಜಾತಾ, ರಾಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.