ADVERTISEMENT

ಮೋಡಿ ಮಾಡಿದ ಚೆನ್ನೈ ಸಹೋದರಿಯರ ಯುಗಳಗಾಯನ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:22 IST
Last Updated 18 ಮೇ 2019, 20:22 IST
ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವಾರ್ಷಿಕ ಸಂಗೀತೋತ್ಸವದಲ್ಲಿ ಶನಿವಾರ ಚೆನ್ನೈನ ಅಕ್ಕರೈ ಸಹೋದರಿಯರಾದ ಎಸ್.ಶುಭಲಕ್ಷ್ಮಿ ಮತ್ತು ಎಸ್.ಸ್ವರ್ಣಲತಾ ಯುಗಳಗಾಯನ ಕಚೇರಿ ನಡೆಯಿತು
ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವಾರ್ಷಿಕ ಸಂಗೀತೋತ್ಸವದಲ್ಲಿ ಶನಿವಾರ ಚೆನ್ನೈನ ಅಕ್ಕರೈ ಸಹೋದರಿಯರಾದ ಎಸ್.ಶುಭಲಕ್ಷ್ಮಿ ಮತ್ತು ಎಸ್.ಸ್ವರ್ಣಲತಾ ಯುಗಳಗಾಯನ ಕಚೇರಿ ನಡೆಯಿತು   

ಕೊಣನೂರು: ರಾಮನಾಥಪುರ ಹೋಬಳಿಯ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 18ನೇ ವಾರ್ಷಿಕ ಸಂಗೀತೋತ್ಸವದ ಮೂರನೇ ದಿನವಾದ ಶನಿವಾರ ಚೆನ್ನೈನ ಅಕ್ಕರೈ ಸಹೋದರಿಯರಾದ ಎಸ್.ಶುಭಲಕ್ಷ್ಮಿ ಮತ್ತು ಎಸ್.ಸ್ವರ್ಣಲತಾ ನಡೆಸಿಕೊಟ್ಟ ಸಂಗೀತ ಯುಗಳಗಾಯನ ಕೇಳುಗರನ್ನು ಹಿಡಿದಿಟ್ಟಿತು.

ಬೆಳಿಗ್ಗೆ 10.30ಕ್ಕೆ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಆರಂಭವಾದ ಯುಗಳಗಾಯನ, ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದ ಧ್ರುವತಾರೆಗಳಾದ ತ್ಯಾಗರಾಜರು, ಸ್ವರ್ಣಲತಾ ಮುಂತಾದವರು ರಚಿಸಿದ ಅನೇಕ ಕೃತಿಗಳನ್ನು ರಾಗವಾಗಿ ಹಾಡಿ ಸಂಗೀತಪ್ರಿಯರನ್ನು ಮಂತ್ರಮುಗ್ಧಗೊಳಿಸಿದರು.

ಅನೇಕ ಜನಪ್ರಿಯ ಸಂಗೀತ ಕೃತಿಗಳನ್ನು ಹಾಡಿದ ಸೋದರಿಯರು ಮೇರುಸಮಾನ ಕೃತಿಯನ್ನು ಮಾಯಮಾಳವಗೌಳ ರಾಗದಲ್ಲಿ, ನನ್ನೂನ್ರೋವಾ ಕೃತಿಯನ್ನು ಜ್ಯೋತಿಸ್ವರೂಪಿಣೆ ರಾಗದಲ್ಲಿ, ಬ್ರೋವಬಾರಮ್ಮ ಕೃತಿಯನ್ನು ಬಹುದ್ವಾರಿ ರಾಗದಲ್ಲಿ ಮತ್ತು ಕನಕಭೂಷಣ ಕೃತಿಯನ್ನು ಪ್ರಸ್ತುತಿಪಡಿಸಿ ರಾಗಸುಧೆ ಹರಿಸಿ ಪ್ರತಿಹಂತದಲ್ಲೂ ಚಪ್ಪಾಳೆ ಗಿಟ್ಟಿಸಿದರು.

ADVERTISEMENT

ವಿದ್ವಾನ್ ಚಾರುಲತಾ ವಯಲಿನ್, ವಿದ್ವಾನ್ ಜಯಚಂದ್ರರಾವ್ ಮೃದಂಗ, ಗಿರಿಧರ ಉಡುಪ ಘಟಂ ನುಡಿಸಿ ರಾಗತಾಳ ಮೇಳೈಸಿದರು.

ಸಹೋದರಿಯರ ಸುಶ್ರಾವ್ಯಗಾಯನ, ಅನುಭವಿ ಪಕ್ಕವಾದ್ಯ ಕಲಾವಿದರಿಂದ ಹದವರಿತ ತಾಳಸಂಯೋಜನೆ ಸಂಗೀತ ರಸಿಕರ ಮನತಣಿಸಿತು.ಶುಕ್ರವಾರ ಸಂಜೆ ಸಂಗೀತಪ್ರಧಾನ ಕೃತಿಗಳನ್ನು ವಿದ್ವಾನ ಕಲ್ಯಾಣಪುರಂ ಎಸ್.ಅರವಿಂದ್ ಹಾಡಿ ಮೆಚ್ಚುಗೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.