ADVERTISEMENT

ಹಾಸನ: ತಾಲ್ಲೂಕು ಕೇಂದ್ರಗಳಲ್ಲಿ ಮಕ್ಕಳ ಐಸಿಯು ವಾರ್ಡ್‌

ಕೋವಿಡ್ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ದತೆಗೆ ಸಚಿವೆ ಶಶಿಕಲಾ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:48 IST
Last Updated 18 ಜೂನ್ 2021, 16:48 IST
ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು
ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು   

ಹಾಸನ: ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಚಿಕಿತ್ಸೆಗೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಹಾಗೂ ಆರೈಕೆಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಅಸ್ಪತ್ರೆಗಳಲ್ಲಿ ಮಕ್ಕಳ ಐ.ಸಿ.ಯು ವಾರ್ಡ್, ವೆಂಟಿಲೇಟರ್ ವ್ಯವಸ್ಥೆ, ತಜ್ಞ ವೈದ್ಯರ ನಿಯೋಜನೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ಔಷಧಿ ಸರಬರಾಜು ಮತ್ತಿತರಪ್ರಮುಖ ಅಂಶಗಳ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದರು.

65,911 ಅಂಗನವಾಡಿ ಕೇಂದ್ರಗಳಿದ್ದು, ಕಳೆದ ವರ್ಷ ಹಲವು ಕಟ್ಟಡ ನಿರ್ಮಾಣಮಾಡಲಾಗಿದೆ. ನಿವೇಶನ ಲಭ್ಯ ಇರುವ ಕಡೆ ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಕೋವಿಡ್ ನಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆ ರಿಗೆ ₹30 ಲಕ್ಷ ಪರಿಹಾರ ನೀಡಲಾಗುವುದು. ಅಂಗನವಾಡಿ ಕೇಂದ್ರದ ಮೂಲಕ ಬಾಣಂತಿಯರು ಹಾಗೂ ಮಕ್ಕಳಿಗೆಪೂರಕ ಪೌಷ್ಟಿಕ ಆಹಾರ ಮನೆಗಳಿಗೆ ಕಳಿಸಿಕೊಡಲು ಕ್ರಮವಹಿಸಲಾಗುತ್ತಿದೆ. ವಲಸೆಬಂದವರಿಗೂ ಕೊಡಲಾಗುತ್ತಿದೆ ಎಂದು ಹೇಳಿದರು.

ಮಕ್ಕಳ ತಜ್ಞರ ಸಂಘ ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಉಚಿತವಾಗಿ ಸೇವಾನೆರವು ನೀಡುವ ಆಶ್ವಾಸನೆ ನೀಡಿದ್ದು, ಅವರ ಸಹಕಾರ ಬಳಸಲಾಗುವುದು. ಶಾಸಕರಸಲಹೆಗಳನ್ನು ಸ್ವೀಕರಿಸಿ ಸುಧಾರಣೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ 0–18 ವರ್ಷದೊಳಗಿನ 7411 ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು.ಕೋವಿಡ್‌ನಿಂದ ಎರಡು ನವಜಾತಶಿಶುಗಳು, ಎರಡು ತಿಂಗಳ ಮಗು ಮೃತಪಟ್ಟಿದೆ. ಮಕ್ಕಳ ಚಿಕಿತ್ಸೆಗೆ ಬೇಕಾದವೆಂಟಿಲೇಟರ್‌ ಪೂರೈಸುವಂತೆ ಮನವಿ ಮಾಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮಕ್ಕಳ ಚಿಕಿತ್ಸೆಗೆ ಅಗತ್ಯ ಪ್ರಮಾಣದವೈದ್ಯರ ನೇಮಕವಾಗಬೇಕು. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಜೊತೆಗೆ ಪ್ರತ್ಯೇಕ ಕೋವಿಡ್ಕೇರ್ ಕೇಂದ್ರ ಪ್ರಾರಂಭಿಸಬೇಕು. ಚಿಕ್ಕ ಮಕ್ಕಳ ಜೊತೆಗೆ ಒಬ್ಬರು ಪೋಷಕರನ್ನು ಇರಲುವ್ಯವಸ್ಥೆ ಮಾಡಬೇಕು. ಮಕ್ಕಳು, ಬಾಣಂತಿಯರು ಹಾಗೂ ಗರ್ಭೀಣಿಯರಿಗೆ ಪೂರೈಸುತ್ತಿರುವ ಪೌಷ್ಟಿಕ ಆಹಾರ ಕಳಪೆಯಾಗಿದೆ. ಆಹಾರವನ್ನು ಮಕ್ಕಳು ಬೀದಿಯಲ್ಲಿಬಿಸಾಡುತ್ತಿವೆ. ಆಹಾರ ಪೂರೈಸುವ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಪೂರಕ ಪೌಷ್ಟಿಕ ಆಹಾರ ಗುಣಮಟ್ಟ ಸುಧಾರಣೆ ಹಾಗೂ ಲೋಪ ತಡೆಯಲು ಕ್ರಮಕೈಗೊಳ್ಳಲಾಗುವುದು. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡುವ ಕುರಿತು ತಜ್ಞ ರೊಂದಿಗೆ ಸಭೆ ನಡೆಸಲಾಗಿದ್ದು, ಅವ್ಯವಸ್ಥೆಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಮಕ್ಕಳಿಗೆ ರೋಗ ನಿರೋಧಕ ಶಕ್ತಿ ವೃದ್ದಿಗೆಕ್ರಮವಹಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು ಬಲಪಡಿಸಿ, ಕೋವಿಡ್‌ ಚಿಕಿತ್ಸೆಬಳಸಬೇಕು. ಹಿಮ್ಸ್ ಆಸ್ಪತ್ರೆಯನ್ನು ಇತರೆ ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ತೆರೆಯಬೇಕು ಎಂದರು.

ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನಿರ್ದೇಶಕ ಡಾ.ವಿ.ಮುನಿರಾಜ್, ಪೋಲಿಸ್ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ .ಪರಮೇಶ್, ಹೆಚ್ಚುವರಿಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.